ಕರ್ನಾಟಕ ಚುನಾವಣೆ; ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಕೆ ಕಚೇರಿಗಳ ವಿಳಾಸ
ಬೆಂಗಳೂರು, ಏಪ್ರಿಲ್ 12; ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 13ರ ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಘೋಷಣೆಯಾಗಲಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ನಾಮಪತ್ರ ಸ್ವೀಕಾರ ಮಾಡಲು 28 ಕೇಂದ್ರಗಳನ್ನು ತೆರೆಯಲಾಗಿದೆ.
ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆಯೇ ನಾಮಪತ್ರಗಳ ಸಲ್ಲಿಕೆ ಆರಂಭವಾಗಲಿದೆ. ಅಭ್ಯರ್ಥಿಗಳು ನಾಮಪತ್ರವನ್ನು ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಕೆ ಮಾಡಬಹುದು. ನಾಮಪತ್ರ ಸಲ್ಲಿಕೆಗೆ ರಜಾದಿನಗಳನ್ನು ಹೊರತುಪಡಿಸಿ ಏಪ್ರಿಲ್ 20ರ ತನಕ ಅವಕಾಶವಿದೆ.

ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸುವ ಅಭ್ಯರ್ಥಿಯು ತನ್ನೊಂದಿಗೆ 4 ಜನರನ್ನು ಮಾತ್ರ ಕರೆದುಕೊಂಡು ಬರಲು ಅವಕಾಶವಿದೆ. ಅಭ್ಯರ್ಥಿ ಸೇರಿ ಒಟ್ಟು 5 ಜನ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿರಬಹುದು. ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸ್ವೀಕರಿಸಲು ಚುನಾವಣಾಧಿಕಾರಿಗಳ ಕಛೇರಿಯನ್ನು ಸ್ಥಾಪಿಸಲಾಗಿದೆ.
ಏಪ್ರಿಲ್ 13ರ ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನ. ಏಪ್ರಿಲ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಮೇ 10ರ ಬುಧವಾರ ಚುನಾವಣೆ ನಡೆಯಲಿದೆ, ಮೇ 13ರ ಶನಿವಾರ ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ನಿಯಮಗಳು; 2023ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವುದು ಸೇರಿದಂತೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಏಪ್ರಿಲ್ 14 ಮತ್ತು 16ರಂದು ಸರ್ಕಾರಿ ರಜೆ ಇದ್ದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿಲ್ಲ. ಏಪ್ರಿಲ್ 24 ರಂದು ಮಧ್ಯಾಹ್ನ 3 ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಬಳಿಕ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗ ಸಿದ್ಧಪಡಿಸಲಿದೆ.
ಅಭ್ಯರ್ಥಿಗಳು ನಾಮಪತ್ರಗಳ ಪತ್ರಗಳನ್ನು 2ಬಿಯ ಸಲ್ಲಿಸಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇರಬಾರದು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ನಾಮಪತ್ರದೊಂದಿಗೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿರುವ ಬಗ್ಗೆ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯಿಂದ ಪಡೆದ ಮತದಾರರ ಪಟ್ಟಿಯ ದೃಢೀಕೃತ ಪಟ್ಟಿಯನ್ನು ಹಾಜರುಪಡಿಸಬೇಕು.
ನಾಮಪತ್ರ ಸಲ್ಲಿಕೆ ವೇಳೆ ವೆಚ್ಚದ ಮೇಲ್ವಿಚಾರಣೆಯನ್ನು ಸುಲಭಗೊಳಿಸುವ ದೃಷ್ಟಿಯಿಂದ ಪ್ರತಿಯೊಬ್ಬ ಅಭ್ಯರ್ಥಿಯು ಚುನಾವಣಾ ವೆಚ್ಚದ ಉದ್ದೇಶಕ್ಕೆ ಏಕಮಾತ್ರವಾಗಿ ಒಂದು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಆತ ನಾಮಪತ್ರ ಸಲ್ಲಿಸುವ ದಿನಾಂಕಕ್ಕಿಂತ ಒಂದು ದಿವಸ ಮುಂಚಿತವಾಗಿ ತೆರೆಯಬೇಕು. ಬ್ಯಾಂಕ್ ಖಾತೆ ಸಂಖ್ಯೆಯನ್ನು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಚುನಾವಣಾಧಿಕಾರಿಗೆ ಲಿಖಿತ ರೂಪದಲ್ಲಿ ನೀಡಬೇಕು.
ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಯು ಸಕ್ಷಮ ಪ್ರಾಧಿಕಾರಿಯವರಿಂದ ಪಡೆದ ಜಾತಿ ದೃಢೀಕರಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಬೇಕು. ಸ್ಪರ್ಧಿಸುವ ಅಭ್ಯರ್ಥಿಗಳು ನಿಗದಿತ ಫಾರಂ-26 ರಲ್ಲಿ ಕ್ರಿಮಿನಲ್ ಮೊಕದ್ದಮೆಗಳು, ಆಸ್ತಿ ವಿವರಗಳು, ವಿದ್ಯಾರ್ಹತೆ ಇತ್ಯಾದಿ ಮಾಹಿತಿಗಳ ಅಫಿಡೆವಿಟ್‍ಗಳನ್ನು ಪಬ್ಲಿಕ್ ನೋಟರಿಯಿಂದ ಪ್ರಮಾಣೀಕರಿಸಿ ಸಲ್ಲಿಸಬೇಕು.
ನಾಮಪತ್ರಗಳನ್ನು ಸಲ್ಲಿಸುವ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಯವರ ಕಚೇರಿಗೆ ಪ್ರವೇಶ ಇರುತ್ತದೆ. ಅದೇರೀತಿ ನಾಮಪತ್ರಗಳನ್ನು ಸಲ್ಲಿಸಿದ ನಂತರ ಅಭ್ಯರ್ಥಿಯು ಚುನಾವಣಾಧಿಕಾರಿಯವರ ಮುಂದೆ ಗೊತ್ತುಪಡಿಸಿದ ನಮೂನೆಯನ್ನು ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡಬೇಕು.












Click it and Unblock the Notifications