ಸೋಲು-ಗೆಲುವಿನಲ್ಲಿ ಮತ ಪ್ರಮಾಣ ಎಷ್ಟು ಮುಖ್ಯ?
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಜೊತೆಗೆ ಎಕ್ಸಿಟ್ ಪೋಲ್ ನೋಡಲು ಜನರು ಕಾಯುತ್ತಿದ್ದಾರೆ. ಇಷ್ಟೆಲ್ಲದರ ನಡುವೆ 2018ರ ಚುನಾವಣೆಯಲ್ಲಿ ಯಾವ ಯಾವ ಪಕ್ಷ ಎಷ್ಟೆಷ್ಟು ಪ್ರಮಾಣದ ಮತ ಪಡೆದಿತ್ತು ಗೊತ್ತಾ? ಗೆಲುವಿನಲ್ಲಿ ವೋಟಿಂಗ್ ಪರ್ಸಂಟೇಜ್ ಬೀರಿದ ಪರಿಣಾಮ ಎಂತಹದ್ದು? ತಿಳಿಯೋಣ ಬನ್ನಿ.
ಸ್ವತಂತ್ರ ಭಾರತದಲ್ಲಿ ಕನ್ನಡ ನಾಡು ರೂಪುಗೊಂಡು ಅಮೃತ ಮಹೋತ್ಸವ ಮುಗಿದಿದೆ. ಶತಮಾನೋತ್ಸವಕ್ಕೆ ಸಜ್ಜಾಗುತ್ತಿರುವ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ 70 ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. ಹಾಗಾದರೆ 2018ರಲ್ಲಿ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ನಡುವೆ ಹಂಚಿಕೆಯಾಗಿದ್ದ ಮತ ಪ್ರಮಾಣ ಎಷ್ಟು ಗೊತ್ತಾ? ಯಾವ ಪಕ್ಷ ಹೆಚ್ಚು ಮತ ಪಡೆದಿತ್ತು ಹಾಗೂ ಯಾವ ಪಕ್ಷ ಹೆಚ್ಚು ಸ್ಥಾನದಲ್ಲಿ ಗೆದ್ದಿತ್ತು ಎಂಬುದರ ಕಂಪ್ಲೀಟ್ ಇನ್ಫರ್ಮೇಷನ್ ನಿಮಗಾಗಿ ಇಲ್ಲಿದೆ ಓದಿ.

ಕಾಂಗ್ರೆಸ್‌ಗೆ ಹೆಚ್ಚು ಮತ, ಬಿಜೆಪಿಗೆ ಹೆಚ್ಚು ಸ್ಥಾನ!
ಇದನ್ನೇ ಅಲ್ವೇ ಚುನಾವಣೆ ಮ್ಯಾಜಿಕ್ ಅಂತಾ ಹೇಳೋದು. ಯಾವುದೇ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಪಡೆಯುವ ಪಕ್ಷ ಸಾಮಾನ್ಯವಾಗಿ ಅತಿಹೆಚ್ಚು ವೋಟಿಂಗ್ ಪರ್ಸಂಟೇಜ್ ಕೂಡ ಪಡೆದಿರುತ್ತದೆ. ಆದರೆ 2018ರ ಚುನಾವಣೆಯಲ್ಲಿ ಇದು ಉಲ್ಟಾ ಆಗಿತ್ತು, 104 ಸ್ಥಾನ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಶೇ. 36.35ರಷ್ಟು ಮತ ಪಡೆದಿತ್ತು. ಆದ್ರೆ 80 ಸ್ಥಾನ ಪಡೆದು 2ನೇ ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್ ಪಕ್ಷ ಶೇಕಡಾ 38.14ರಷ್ಟು ಮತಗಳಿಸಿತ್ತು. ಜೆಡಿಎಸ್ ಪಡೆದ ಮತ ಪ್ರಮಾಣ ಎಷ್ಟು ಗೊತ್ತಾ?
JDSಗೆ ಶೇ. 18.3 ಮತ, 37 ಸ್ಥಾನ!
ಹೌದು, 104 ಸ್ಥಾನ ಗೆದ್ದ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, 80 ಸ್ಥಾನ ಪಡೆದು 2ನೇ ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್ 2018ರಲ್ಲಿ ಅಧಿಕಾರ ಕಳೆದುಕೊಂಡಿತ್ತು. ಆದರೆ ಜೆಡಿಎಸ್ ಮಾತ್ರ ಶೇ. 18.3 ಮತ ಪಡೆದು 37 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಜೆಡಿಎಸ್. ಹಾಗಾದರೆ ರಾಜಕೀಯ ಪಕ್ಷಗಳ ಗೆಲುವಿನಲ್ಲಿ ಮತಗಳಿಕೆ ಪ್ರಮಾಣ ಅದೆಷ್ಟು ಪರಿಣಾಮ ಬೀರುತ್ತದೆ ಗೊತ್ತಾ?
2008ರಲ್ಲೂ ಇದೇ ಮ್ಯಾಜಿಕ್ ನಡೆದಿತ್ತು!
ಹೌದು, 2018ರ ರೀತಿಯಲ್ಲೇ 2008ರಲ್ಲೂ ಇದೇ ರೀತಿ ಮ್ಯಾಜಿಕ್ ನಡೆದಿತ್ತು. ಆಗ 110 ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದ್ರೆ ಆಗಲೂ 80 ಸ್ಥಾನ ಪಡೆದಿದ್ದ ಕಾಂಗ್ರೆಸ್ 2ನೇ ಸ್ಥಾನ ಪಡೆದಿತ್ತು. 2008ರ ಮತಹಂಚಿಕೆ ಪ್ರಮಾಣ ನೋಡುವುದಾದರೆ, ಮೊದಲ ಸ್ಥಾನ ಪಡೆದಿದ್ದ ಬಿಜೆಪಿ ಗಳಿಸಿದ್ದು ಶೇ. 33.86ರಷ್ಟು ಮತ ಮಾತ್ರ. ಆದರೆ 2ನೇ ಸ್ಥಾನದಲ್ಲಿ ಇದ್ದು ಕೇವಲ 80 ಸ್ಥಾನ ಪಡೆದಿದ್ದ ಕಾಂಗ್ರೆಸ್ ಶೇ. 34.76ರಷ್ಟು ಮತ ಗಳಿಸಿತ್ತು. ಹತ್ತಿರ ಹತ್ತಿರ ಶೇ. 1ರಷ್ಟು ಮತಗಳಿಕೆ ಹೆಚ್ಚಾಗಿಯೇ ಇತ್ತು. ಜೆಡಿಎಸ್ ಶೇಕಡಾ 18.96ರಷ್ಟು ಮತ ಗಳಿಸಿತ್ತು.
ಸರ್ಕಾರ ರಚನೆಗೆ ಸ್ಥಾನಗಳೇ ಮುಖ್ಯ!
ಅಂದಹಾಗೆ ಸರ್ಕಾರ ರಚನೆಗೆ ಮತ ಪ್ರಮಾಣ ಗಣನೆಗೆ ಬರುವುದಿಲ್ಲ, ಆದರೆ ಸ್ಥಾನಗಳೇ ಮುಖ್ಯವಾಗುತ್ತವೆ. ಆದರೂ ಪಕ್ಷಗಳ ಗೆಲುವಿನಲ್ಲಿ ಮತ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಜಾಗಗಳಲ್ಲಿ ಕೆಲವೇ ಮತಗಳ ಅಂತರದಲ್ಲೂ ಅಭ್ಯರ್ಥಿಗಳು ಸೋತು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಮತ ಪ್ರಮಾಣದ ಏರಿಳಿತ ಹೆಚ್ಚು. ಹಾಗೇ ಕೆಲವು ಭಾಗದಲ್ಲಿ ಒಂದು ಪಕ್ಷ ಪ್ರಬಲವಾಗಿದ್ದು, ಮತ್ತೊಂದು ಭಾಗದಲ್ಲಿ ತುಂಬಾ ದುರ್ಬಲವಾಗಿದ್ದರೂ ಹೀಗೆ ಆಗುತ್ತದೆ.
ಒಟ್ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಇನ್ನೇನು ಮುಕ್ತಾಯವಾಗಲಿದೆ. ಸಂಜೆ 6ಕ್ಕೆ ಮತದಾನ ಮುಗಿಯಲಿದ್ದು, ಆ ನಂತರ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ರಿಸಲ್ಟ್‌ಗೆ ಕೌಂಟ್‌ಡೌನ್ ಶುರುವಾಗಲಿದೆ. ಈಗಾಗಲೇ ಅಭ್ಯರ್ಥಿಗಳ ಭವಿಷ್ಯ ಬಹುತೇಕ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಮೇ 13ಕ್ಕೆ ಯಾರು ವಿನ್ನರ್, ಯಾರು ಲೂಸರ್ ಅನ್ನೋದು ಗೊತ್ತಾಗಲಿದೆ.












Click it and Unblock the Notifications