ಅನಂತಕುಮಾರ್ ಕೊಡುಗೆ ನೆನೆಯದಿರುವುದು ಕ್ಷುಲ್ಲಕ: ಬಿಜೆಪಿ ವಿರುದ್ಧವೇ ಕೇಂದ್ರದ ಮಾಜಿ ಸಚಿವರ ಪುತ್ರಿ ಟ್ವೀಟ್
ಬೆಂಗಳೂರು, ಮಾರ್ಚ್ 28: ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಪುತ್ರಿ ವಿಜೇತಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಸರಿ ಪಕ್ಷವು ತಮ್ಮ ತಂದೆಗೆ ನೀಡಬೇಕಾದ ಗೌರವವನ್ನು ನೀಡುತ್ತಿಲ್ಲ. ಅವರನ್ನು ಮರೆತಿದೆ ಎಂದು ವಿಜೇತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ವೇಳೆ ತಂದೆ ಅನಂತಕುಮಾರ್ ಅವರನ್ನು ಬಿಜೆಪಿ ಸ್ಮರಿಸಿಲ್ಲ. ಈ ಕುರಿತು ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ಕೇಳಿಕೊಂಡಿದ್ದಾರೆ.

ದಿವಂಗತ ಅನಂತಕುಮಾರ್ ಅವರ ಇಬ್ಬರು ಪುತ್ರಿಯರಲ್ಲಿ ಒಬ್ಬರಾದ ವಿಜೇತಾ ಅವರು ಟ್ವಿಟರ್‌ನಲ್ಲಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನಂತಕುಮಾರ್‌ಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಇದರಿಂದಾಗಿ ಬಿಜೆಪಿಯ ಒಂದು ವರ್ಗದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ವಿಜೇತಾ ಈ ಕಾಮೆಂಟ್ ಮಾಡಿದ್ದಾರೆ.
'ಅಪ್ಪ ( ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ) 1987ರಲ್ಲಿ ಔಪಚಾರಿಕವಾಗಿ ಬಿಜೆಪಿ ಸೇರಿದರು ಮತ್ತು ಕೊನೆಯ ಉಸಿರು ಇರುವವರೆಗೂ ಬಿಜೆಪಿಗಾಗಿ ದುಡಿದರು. ಉದ್ಘಾಟನಾ ಕಾರ್ಯಕ್ರಮಗಳು, ರಸ್ತೆಗಳು, ರೈಲು ಮಾರ್ಗಗಳಲ್ಲಿ ಅವರ ಹೆಸರನ್ನು ಇಡದಿರುವುದು ಬೇಸರ ತಂದಿದೆ. ಈ ಮೂಲಕ ಅವರ ಕೊಡುಗೆಗಳನ್ನು ಗುರುತಿಸದಿರುವುದು ಕ್ಷುಲ್ಲಕವಾಗಿದೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ' ಎಂದು ವಿಜೇತಾ ಟ್ವೀಟ್ ಮಾಡಿದ್ದಾರೆ.

ಸೋಮವಾರ ಕರ್ನಾಟಕ ಸರ್ಕಾರವು ನಟ ಹಾಗೂ ರಾಜಕಾರಣಿ ಅಂಬರೀಶ್ ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಇಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ 16 ಅಡಿಯ ಕಂಚಿನ ಪ್ರತಿಮೆಯನ್ನೂ ಅನಾವರಣಗೊಳಿಸಲಾಯಿತು.
ಈ ವರ್ಷದ ಆರಂಭದಲ್ಲಿ ಸರ್ಕಾರವು ಬೆಂಗಳೂರು ಹೊರ ವರ್ತುಲ ರಸ್ತೆಗೆ ( ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಮತ್ತು ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ನಡುವಿನ 12 ಕಿಮೀ ವ್ಯಾಪ್ತಿ) 'ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್' ಎಂದು ಹೆಸರಿಸಿತು.
ಜಯನಗರದ ರಸ್ತೆಗೆ ದಿವಂಗತ ನಟ ವಜ್ರಮುನಿ ಅವರ ಹೆಸರನ್ನೂ ಸರ್ಕಾರ ನಾಮಕರಣ ಮಾಡಿದೆ. ಆದರೆ, ನಗರದ ಯಡಿಯೂರಿನಲ್ಲಿ ಒಂದು ಸಣ್ಣ ರಸ್ತೆಗೆ ಅನಂತಕುಮಾರ್ ಅವರ ಹೆಸರನ್ನು ಇಡಲಾಗಿದೆ.
ಇತ್ತೀಚೆಗೆ ಉದ್ಘಾಟನೆಗೊಂಡ ಐಐಟಿ- ಧಾರವಾಡದಂತಹ ಕೆಲವು ಪ್ರಮುಖ ಯೋಜನೆಗಳಲ್ಲಿ ಅನಂತಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಅಂತಹ ಉದ್ಘಾಟನಾ ಸಮಾರಂಭಗಳಲ್ಲಿ ದಿವಂಗತ ನಾಯಕ ಅನಂತಕುಮಾರ್ ಅವರ ಹೆಸರು ಪ್ರಸ್ತಾಪವಾಗಿಲ್ಲ.
ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರನ್ನು 2019 ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಅನಂತಕುಮಾರ್ ಬಿಎಸ್ ಯಡಿಯೂರಪ್ಪ ಜೊತೆಗೂಡಿ ಮೊದಲಿನಿಂದಲೂ ಪಕ್ಷ ಕಟ್ಟಿದ್ದರು. ಅನಂತಕುಮಾರ್ ಅವರು ರಾಜ್ಯ ಮತ್ತು ಕೇಂದ್ರದ ನಡುವಿನ ಸಂಪರ್ಕ ಸೇತುವೆ ಎಂದೇ ಜನಜನಿತರಾಗಿದ್ದರು. 2014 ರಿಂದ 2018 ರಲ್ಲಿ ನಿಧನರಾಗುವವರೆಗೆ ಭಾರತದ ಸಂಸದೀಯ ವ್ಯವಹಾರಗಳು, ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾಗಿದ್ದರು. ಅನಂತ್ ಕುಮಾರ್ ಅವರು ದಕ್ಷಿಣ ಬೆಂಗಳೂರಿನಿಂದ 6 ಬಾರಿ ಸಂಸದರಾಗಿದ್ದರು. 26 ಮೇ 2014 ರಿಂದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾಗಿದ್ದರು.
2016 ರಿಂದ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಎರಡು ದಶಕಗಳ ಕಾಲ ಸಂಸತ್ತಿನ ಸದಸ್ಯರಾಗಿದ್ದರು. 1996 ರಿಂದ ಅವರ ಮರಣದವರೆಗೆ ಬೆಂಗಳೂರು ದಕ್ಷಿಣದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. ಅವರು ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ಕ್ರೀಡೆ, ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನಂತಕುಮಾರ್ ಅವರು ನವೆಂಬರ್ 2018 ರಲ್ಲಿ ಬೆಂಗಳೂರಿನಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು.












Click it and Unblock the Notifications