ರಾಜಭವನ ಮುತ್ತಿಗೆ ಯತ್ನ: 50 ವಕೀಲರ ಬಂಧನ
ಬೆಂಗಳೂರು, ಜು. 08: ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ರಾಜೀನಾಮೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ವಕೀಲರ ಪ್ರತಿಭಟನೆ ತೀವ್ರವಾಗಿದೆ. ರಾಜಭವನಕ್ಕೆ ಮುತ್ತಿಗೆ ಹಾಕಲು ವಕೀಲರು ನಿರ್ಧಾರ ಮಾಡಿದ್ದಾರೆ.
ರಾಜಭವನ ಎದುರು ಜಮಾಯಿಸಿರುವ ವಕೀಲರು ರಾಜ್ಯಪಾಲರ ಭೇಟಿಗೆ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲೂ ಕೋರ್ಟ್ ಕಲಾಪ ಬಹಿಷ್ಕಾರ ಮಾಡಿರುವ ವಕೀಲರು ಬೀದಿಗೆ ಇಳಿದಿದ್ದು ಲೋಕಾಯುಕ್ತರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಒಂದು ವಾರದಿಂದ ವಕೀಲರು ಲೋಕಾಯುಕ್ತ ರಾಜೀನಾಮೆಗೆ ಆಗ್ರಹಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಕರವೇ ಮಹಿಳಾ ಘಟಕದ ಕಾರ್ಯಕರ್ತರ ಪ್ರತಿಭಟನೆ ತೀವ್ರವಾಗಿದ್ದು ಸೋನಿಯಾ ನಾರಂಗ್ ಪರಿಸ್ಥಿತಿ ಹತೋಟಿಗೆ ತರಲು ಶ್ರಮಿಸುತ್ತಿದ್ದಾರೆ. ಅನೇಕ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆ ಉಳಿಸಿ
ಲೋಕಾಯುಕ್ತ ಸಂಸ್ಥೆ ಉಳಿಸಲು ಭಾಸ್ಕರ್ ರಾವ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಲೋಕಸತ್ತಾ ಪಾರ್ಟಿ ಕಾರ್ಯಕರ್ತರು ಇನ್ನೊಂದೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಕಚೇರಿ ಎದುರು ಭಿಕ್ಷಾಟನೆ ನಡೆಸುವ ಮೂಲಕ ವಿನೂತನ ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದರು. ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಮುಖಂಡ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.












Click it and Unblock the Notifications