ಮುಸ್ಲಿಮರ ಮೀಸಲಾತಿ ರದ್ದು: ರಾಜ್ಯಪಾಲರಿಗೆ ಎಎಪಿ ದೂರು ನೀಡಲು ಸಜ್ಜು
ಬೆಂಗಳೂರು, ಮಾರ್ಚ್ 26: ಕರ್ನಾಟಕ ರಾಜ್ಯದ ಮುಸ್ಲಿಮರಿಗೆ 2 ಬಿ ವರ್ಗದಲ್ಲಿ ನೀಡಲಾಗುತ್ತಿದ್ದ ಶೇಕಡಾ 4% ಮೀಸಲಾತಿ ಅನ್ನು ರದ್ದುಪಡಿಸಿರುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ ವಿರೋಧಿಸಿದೆ. ಈ ಸಂಬಂಧ ದೂರು ನೀಡಲು ಸಜ್ಜಾಗಿದೆ.
ಈ ಸಂಬಂಧ ಆಮ್ ಆದ್ಮಿ ಪಾರ್ಟಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫರೀದುದ್ದೀನ್ ಷರೀಫ್ ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಘಟಕದ ವತಿಯಿಂದ ಸರ್ಕಾರ ಮೀಸಲಾತಿ ರದ್ದು ಕುರಿತು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೇಳಿಕೆಯಲ್ಲಿ ಫರೀದುದ್ದೀನ್ ಷರೀಫ್ ಅವರು, ಮುಸ್ಲಿಮರಿಗಿದ್ದ 2 ಬಿ ಮೀಸಲಾತಿಯನ್ನು ಯಾರೂ ಕೂಡ ಪ್ರಶ್ನಿಸಿರಲಿಲ್ಲ. ಇದನ್ನು ರದ್ದು ಪಡಿಸಬೇಕೆಂದು ನ್ಯಾಯಾಲಯದ ಆದೇಶ ಕೂಡ ಇಲ್ಲ. ಆದರೂ ರಾಜ್ಯ ಬಿಜೆಪಿ ಸರ್ಕಾರವು ಯಾವುದೇ ಮುನ್ಸೂಚನೇ ನೀಡದೇ, ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಮೀಸಲಾತಿ ರದ್ದು ನಿರ್ಣಯವನ್ನು ಘೋಷಿಸಿದೆ ಇದು ಸರಿಯಲ್ಲ ಎಂದು ದೂರಿದ್ದಾರೆ.
ಸರ್ಕಾರದ ನಿರ್ಧಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಸ್ಲಿಮರನ್ನು ಕೆರಳಿಸಿ ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸಿರುವುದು ಕಂಡು ಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಅಶಾಂತಿ ಸೃಷ್ಟಿಸಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂಬುದು ಇದರಿಂದ ತಿಳಿದು ಬರುತ್ತದೆ ಎಂದು ಆರೋಪಿಸಿದರು.
ಸಮುದಾಯದಲ್ಲಿ ಆತಂಕ?
ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಸ್ಲಿಂ ಸಮುದಾಯ ಹಿಂದುಳಿದೆ. ಅಲ್ಪಸಂಖ್ಯಾತ ಸಮುದಾಯವೆಂಬ ಕಾರಣಕ್ಕೆ ಮುಸ್ಲಿಮರ ಮೇಲೆ ಶೋಷಣೆ ಮಾಡುತ್ತಿರುವ ಘಟನೆಗಳನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮೀಸಲಾತಿ ರದ್ದು ಪಡಿಸಿರುವುದು ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮೀಸಲಾತಿ ಪಡೆಯುವುದು ಮುಸ್ಲಿಮರ ಸಾಂವಿಧಾನಿಕ ಹಕ್ಕಾಗಿದ್ದು, ಇಡಬ್ಲ್ಯುಎಸ್ ಬದಲು 2ಬಿ ಕೆಟಗರಿಯನ್ನು ಮುಂದುವರಿಸಬೇಕು. ಈ ಕುರಿತು ರಾಜ್ಯಪಾಲರಿಗೂ ದೂರು ನೀಡಿ, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಫರೀದುದ್ದೀನ್ ಷರೀಫ್ ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರವೇನು?
ಶೈಕ್ಷಣಿವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದ ಕಾರಣಕ್ಕೆ ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನ ಮೇರೆಗೆ ಶೇ 4 ರಷ್ಟು ಮೀಸಲಾತಿಯನ್ನು ಎಚ್.ಡಿ. ದೇವೇಗೌಡರ ಸರ್ಕಾರ ಮುಸ್ಲಿಮ ಜನಾಂಗಕ್ಕೆ ನೀಡಿತ್ತು. ಈ ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದು ಪಡಿಸಿದೆ.
ಬಿಜೆಪಿ ಸರ್ಕಾರ ಇಂತಹ ನಿರ್ಧಾರ ಮೂಲಕ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ನಾಯಕರ ಆದಿಯಾಗಿ ವಿವಿಧ ಪಕ್ಷದ ಮುಖಂಡರು, ಮುಸ್ಲಿಂ ನಾಯಕರು, ಮುಸ್ಲಿಂ ಪರ ಸಂಘಟನೆಗಳ ಖಂಡಿಸಿವೆ.
ಆದರೆ ಈ ಕುರಿತು ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯ ರದ್ದು ಮಾಡಿದ್ದೇವೆ. ಈ ಮೂಲಕ ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ನಿಂತಿದೆ. ಮುಸ್ಲಿಮರಿಗೆ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಿ ಶೇ 4 ರಷ್ಟಿದ್ದ ಮೀಸಲಾತಿಯನ್ನು ರದ್ದಿನಿಂದ ಅನ್ಯಾಯ ಆಗಿಲ್ಲ. ಅವರಿಗೆ ಶೇಕಡಾ 4ರಷ್ಟು ಆರ್ಥಿಕವಾಗಿ ಅರ್ಹತೆ ಇದೆ. ನಾಲ್ಕರ ಬದಲಿದೆ ಶೇಕಡಾ 10 ರಷ್ಟು ಮೀಸಲಾತಿ ನೀಡಲಾಗಿದೆ. ಅನ್ಯಾಯ ಹೇಗಾಗುತ್ತದೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಹಿತರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗಿದೆ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡರು.












Click it and Unblock the Notifications