Bengaluru Karaga: ಕರಗ ಮೆರವಣಿಗೆ ವೇಳೆ ದುರ್ಘಟನೆ, ಅಗ್ನಿ ಅವಘಡದಿಂದ ಬೈಕ್‌ಗಳಿಗೆ ಬೆಂಕಿ
ಬೆಂಗಳೂರು, ಏಪ್ರಿಲ್. 06: ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 6 ರ ಗುರುವಾರದಂದು ನಡೆದ ವಿಶೇಷ ಪೂಜಾ ವಿಧಿವಿಧಾನದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಎಚ್ಚೆತ್ತುಕೊಂಡ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಅಪಾರ ಪ್ರಮಾಣದ ಕರ್ಪೂರವನ್ನು ಬಳಸಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು, ಈ ವೇಳೆ ಹಲವಾರು ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ.
ಐತಿಹಾಸಿಕ ಬೆಂಗಳೂರು ಕರಗದಲ್ಲಿ ಭಕ್ತರು ದೊಡ್ಡ ದೊಡ್ಡ ಕರ್ಪೂರವನ್ನು ಹಚ್ಚಿ ಆಚರಣೆ ನಡೆಸುವುದು ಪದ್ಧತಿಯಾಗಿದೆ. ಕರಗ ಉತ್ಸವದ ಅಂಗವಾಗಿ ಕರ್ಪೂರ ಹಚ್ಚಿ ದ್ರೌಪದಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಗ್ನಿ ಅವಘಡದ ವಿಷಯ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಇನ್ನು ಬೆಂಕಿ ಹತ್ತಿಕೊಂಡು ಬೈಕ್‌ಗಳು, ರಸ್ತೆಯಾದ್ಯಂತ ಕರ್ಪೂರ ಉರಿಯುತ್ತಿರುವುದನ್ನು ಮತ್ತು ಕೆಲವು ಬೈಕ್‌ಗಳಿಗೆ ಬೆಂಕಿ ಹಬ್ಬುತ್ತಿರುವುದು, ಜನರು ಬೆಂಕಿ ನಂದಿಸಲು ಯತ್ನಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವರದಿಗಳ ಪ್ರಕಾರ, ಭಕ್ತರು ನೂರಾರು ಕಿಲೋಗ್ರಾಂಗಳಷ್ಟು ಕರ್ಪೂರವನ್ನು ಎನ್ಆರ್ ಜಂಕ್ಷನ್ನಿಂದ ದೇವಸ್ಥಾನದವರೆಗೆ ರಸ್ತೆಗಳ ತುಂಬ ಇಟ್ಟಿದ್ದರು.
ದೊಡ್ಡ ದೊಡ್ಡ ಕರ್ಪೂರದ ಉಂಡೆಗಳಿಗೆ ಬೆಂಕಿ ಹಚ್ಚಿದಾಗ ಪಕ್ಕದಲ್ಲಿದ್ದ ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು. ಘಟನೆಯಲ್ಲಿ 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮವಾಗಿವೆ. ಭಕ್ತರು ಪ್ರತಿ ವರ್ಷದಂತೆ ಈ ಬಾರಿಯೂ ಭಾಎಇ ಕರ್ಪೂರ ಹಚ್ಚಲಿರುವ ಹಿನ್ನೆಲೆ ಬೈಕ್ ಮಾಲೀಕರಿಗೆ ತಮ್ಮ ಬೈಕ್‌ಗಳನ್ನು ತೆರವುಗೊಳಿಸುವಂತೆ ಮೈಕ್ನಲ್ಲಿ ಕೂಗಿ ಹೇಳಲಾಗಿತ್ತು. ಆದರೂ ಬೈಕ್‌ಗಳನ್ನು ಸ್ಥಳದಿಂದ ತೆಗೆದಿರಲಿಲ್ಲ.
ಬೆಂಗಳೂರಿನ ಈ ಕರಗ ಉತ್ಸವವು ಶಕ್ತಿಯ ಅವತಾರವೆಂದು ಪರಿಗಣಿಸಲ್ಪಟ್ಟಿರುವ ದ್ರೌಪದಿ ದೇವಿಗೆ ಸಮರ್ಪಿತವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಪೌರ್ಣಮಿಯಂದು ಗುರುವಾರ ಮಧ್ಯರಾತ್ರಿ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಲಿದೆ. ಚೈತ್ರ ಪೌರ್ಣಮಿ ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಬರುತ್ತದೆ.

ಈ ಉತ್ಸವದಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮಾಡಲಾಗುತ್ತದೆ. ಗುರುವಾರ ಮಧ್ಯರಾತ್ರಿ 12.30ಕ್ಕೆ ಕರಗದ ಮೆರವಣಿಗೆ ದೇವಸ್ಥಾನದಿಂದ ಹೊರ ಬರಲಿದೆ. ಪುಷ್ಪ ಕರಗವನ್ನು ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅರ್ಚಕ ಜ್ಞಾನೇಂದ್ರ ವಹ್ನಿಕುಲ ಗೌಡ ಅವರು ಈ ಬಾರಿಯೂ ನೆರವೇರಿಸಲಿದ್ದಾರೆ. ಕರಗದ ಮೆರವಣಿಗೆಯು ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ಬಳೆಪೇಟೆ, ದೊಡ್ಡಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ಹಲಸೂರು, ಕೆಆರ್‌ಮಾರುಕಟ್ಟೆ, ಕಾಟನ್‌ಪೇಟೆ ಮತ್ತಿತರ ಪ್ರದೇಶಗಳಲ್ಲಿ ಸುಮಾರು 38 ಕಿ.ಮೀ. ಸಂಚರಿಸಲಿದೆ. ಅನಾದಿ ಕಾಲದ ಆಚರಣೆಯಂತೆ ಈ ಬಾರಿಯೂ ಕರಗ ಹಜರತ್ ತವಕ್ಕಲ್ ಮಸ್ತಾನ್ ಸಾಹೇಬ್ ದರ್ಗಾಕ್ಕೆ ತೆರಳಲಿದೆ.
ಐತಿಹಾಸಿಕ ಬೆಂಗಳೂರಿನ ಪ್ರಮುಖ ಕರಗ ಉತ್ಸವಕ್ಕೆ 5 ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾಗುವ ನಿರೀಕ್ಷೆಯಿದೆ. ಕರಗ ಮೆರವಣಿಗೆಗೆ ಸುಮಾರು 6 ರಿಂದ 8 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಕರಗ ಸಮಿತಿ ಮಾಹಿತಿ ನೀಡಿದೆ. ಲಕ್ಷಾಂತರ ಜನರು ಭಾಗವಹಿಸುವ ಕಾರಣ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ. ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ. ಕರಗ ಹೊರಡುವ ಮಾರ್ಗದ ರಸ್ತೆ, ಪಾದಚಾರಿ ಮಾರ್ಗಗಳು, ಒಳಚರಂಡಿಗಳ ದುರಸ್ಥಿ ಕಾರ್ಯ ನಡೆಸಲಾಗಿದೆ.












Click it and Unblock the Notifications