Bengaluru Karaga : ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ
ಬೆಂಗಳೂರು, ಏಪ್ರಿಲ್ 05; ಉದ್ಯಾನ ನಗರಿ ಬೆಂಗಳೂರು ವಿಶ್ವ ವಿಖ್ಯಾತ ಕರಗ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ. ಏಪ್ರಿಲ್ 16ರ ಶನಿವಾರ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ.
ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ಕಾಲ ಬೆಂಗಳೂರು ಕರಗ ಸರಳವಾಗಿ ನಡೆದಿತ್ತು. ಈ ಬಾರಿ ವಿಜೃಂಭಣೆಯಿಂದ ಕರಗ ನಡೆಯಲಿದೆ. ಏಪ್ರಿಲ್ 8ರ ಶುಕ್ರವಾರದಿಂದ ಏಪ್ರಿಲ್ 18ರ ಸೋಮವಾರದ ತನಕ ಕರಗ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ನಿಗದಿಯಾಗಿವೆ.
ಕಲ್ಯಾಣಪುರಿ ಎಂಬ ಪ್ರತಿನಾಮಧೇಯದಿಂದ ಪ್ರಖ್ಯಾತವಾಗಿರುವ ಬೆಂಗಳೂರು ಮಹಾನಗರ ತಿಗಳರಪೇಟೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕರಗ ಮಹೋತ್ಸವ ಬಹಳ ಪ್ರಸಿದ್ಧಿ ಪಡೆದಿದೆ.

ಶ್ರೀ ದ್ರೌಪದಿದೇವಿ ಕರಗ ಶಕ್ತ್ಯೋತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾ ರಥೋತ್ಸವವು ಸ್ವಸ್ತಿಶ್ರೀ ಶುಭಕೃತು ನಾಮ ಸಂವತ್ಸರದ ಚೈತ್ರ ಶುದ್ಧ ಸಪ್ತಮಿ ಶುಕ್ರವಾರ 8/4/2022 ರಿಂದ ಚೈತ್ರ ಬಹುಳ ಬಿದಿಗೆ ಸೋಮವಾರ 18/4/2022ರ ವರೆಗೆ ದೇವರ ಸೇವಾ ಕೈಂಕರ್ಯ ನಿಶ್ಚಿಯಿಸಲಾಗಿದೆ.
ಕಾರ್ಯಕ್ರಮಗಳು; ಏಪ್ರಿಲ್ 8ರ ಶುಕ್ರವಾರ ಸಪ್ತಮಿಯಂದು ರಥೋತ್ಸವ ಧ್ವಜಾರೋಹಣ ರಾತ್ರಿ 10 ರಿಂದ ಮುಂಜಾನೆ 3 ಗಂಟೆಯ ತನಕ ನಡೆಯಲಿದೆ.
ಏಪ್ರಿಲ್ 9ರ ಶನಿವಾರದಿಂದ ಏಪ್ರಿಲ್ 12ರ ತನಕ ಪ್ರತಿ ದಿನ ವಿಶೇಷ ಪೂಜೆಗಳು ಮತ್ತು ಮಹಾಮಂಗಳಾರತಿ ರಾತ್ರಿ 7.30ರ ತನಕ ನಡೆಯಲಿದೆ.
ಏಪ್ರಿಲ್ 13ರ ಬುಧವಾರ ದ್ವಾದಶಿ ದಿನ ಆರತಿ ದೀಪಗಳು ರಾತ್ರಿ 3 ಗಂಟೆಗೆ ನಡೆಯಲಿವೆ. ಏಪ್ರಿಲ್ 14ರ ಗುರುವಾರ ತ್ರಯೋದಶಿ ದಿನ ಹಸೀ ಕರಗ (ಸಂಪಂಗಿಕೆರೆ ಅಂಗಳದ ಶಕ್ತಿ ಪೀಠದಲ್ಲಿ) ರಾತ್ರಿ 3 ಗಂಟೆಗೆ ನಡೆಯೆಲಿದೆ.
ಏಪ್ರಿಲ್ 16ರ ಶನಿವಾರ ಚೈತ್ರ ಪೂರ್ಣಿಮಾ ದಿನ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ರಾತ್ರಿ 12.30 ಗಂಟೆಗೆ ನಡೆಯಲಿದೆ.
ಏಪ್ರಿಲ್ 17ರ ಪಾಡ್ಯಮಿ ಪುರಾಣ ಪ್ರವಚನ (ಶಕ್ತಿಸ್ಥಳ ಏಳು ಸುತ್ತಿನ ಕೋಟೆ) ದೇವಸ್ಥಾನದಲ್ಲಿ ಗಾವು ಶಾಂತಿ ರಾತ್ರಿ 2 ಗಂಟೆಗೆ ಮುಂಜಾನೆ 4 ಗಂಟೆ ತನಕ ನಡೆಯಲಿದೆ.
ಏಪ್ರಿಲ್ 18ರ ಸೋಮವಾರ ಬಿದಿಗೆಯಂದು ವಸಂತೋತ್ಸವ ಧ್ವಜಾರೋಹಣ ಸಂಜೆ 4 ಗಂಟೆಗೆ ಮತ್ತು ರಾತ್ರಿ 12 ಗಂಟೆಗೆ ನಡೆಯಲಿದೆ.












Click it and Unblock the Notifications