ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ: ವಿಂಗ್ ಕಮಾಂಡರ್ ಮೇಲೆ ಕೊನೆಗೂ FIR ದಾಖಲು
ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಹಾಗೂ ಕನ್ನಡಿಗನ ನಡುವೆ ನಡೆದ ಗಲಾಟೆ ವಿಚಾರವು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೊದಲಿಗೆ ಗಲಾಟೆ ಬಳಿಕ ವಿಡಿಯೋ ರಿಲೀಸ್ ಮಾಡಿದ್ದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಭಾಷೆಯ ಕತೆ ಕಟ್ಟಿದ್ದರು. ಕನ್ನಡ ಮಾತನಾಡಲಿಲ್ಲ ಎಂದು ನನಗೆ ರಕ್ತ ಬರುವ ಹಾಗೆ ಹೊಡೆದಿದ್ದಾರೆ ಎಂದು ವಿಡಿಯೋ ಮಾಡಿದ್ದರು. ಆದರೆ, ಅಲ್ಲಿದ್ದ ಸಿಸಿಟಿವಿ ವಿಡಿಯೋ ವೈರಲ್ ಆದ ಮೇಲೆ ಈ ವಿಂಗ್‌ಕಮಾಂಡರ್ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಆದರೆ, ಕನ್ನಡಿಗನನ್ನು ಬಂಧಿಸಿರುವ ಪೊಲೀಸರು ಸ್ಪಷ್ಟವಾದ ಸಾಕ್ಷಿ ಇದ್ದರೂ ವಿಂಗ್ ಕಮಾಂಡರ್ ಮೇಲೆ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಕೊನೆಗೂ ಅಧಿಕಾರಿ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಬಂಧನಕ್ಕೆ ಒತ್ತಾಯ ಜೋರಾಗಿದೆ.
ವಿಂಗ್ ಕಮಾಂಡರ್ ಮೊದಲಿಗೆ ಶೇರ್ ಮಾಡಿದ್ದ ವಿಡಿಯೋ ಭಾಷಾ ಕಿಡಿ ಹೊತ್ತಿಸಿತ್ತು. ರಾಷ್ಟ್ರೀಯ ಮಾಧ್ಯಮಗಳು ಕೂಡ ಶಿಲಾದಿತ್ಯ ಬೋಸ್ ಪರವಾಗಿಯೇ ಧ್ವನಿ ಎತ್ತಿದ್ದವು. ಬೆಂಗಳೂರಿನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ಎಂದು ಬಿಂಬಿಸಿದ್ದವು. ಆದರೆ ಸಿಸಿಟಿವಿ ದೃಶ್ಯಾವಳಿಗಳು ವಿಂಗ್ ಕಮಾಂಡರ್‌ನ ಮುಖವಾಡ ಕಳಚಿದೆ. ಅಸಲಿಗೆ ಗಲಾಟೆ ನಡೆದಿರುವುದಂತೂ ಸತ್ಯ, ಆದರೆ ವಿಂಗ್ ಕಮಾಂಡರ್ ಕನ್ನಡಿಗನ ಮೇಲೆ ಮನಸೋ ಇಚ್ಛೆ ಥಳಿಸಿದ್ದಾನೆ. ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆಯೂ ನಡೆಸಿದ್ದಾನೆ. ಇದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ವಿಂಗ್‌ಕಮಾಂಡರ್ ವಿಡಿಯೋ ಆಧರಿಸಿ ಕನ್ನಡಿಗನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದರ ವಿರುದ್ಧ ಕನ್ನಡಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋದಲ್ಲಿ ವಿಂಗ್ ಕಮಾಂಡರ್‌ನ ಅಸಲಿ ಬಣ್ಣ ಬಯಲಾಗಿದ್ದರೂ ಆತನ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಕನ್ನಡಿಗರು ಗಂಭೀರ ಆರೋಪ ಮಾಡಿದ್ದರು. ಹಲವು ಕನ್ನಡಿಗರು ನ್ಯಾಯಕ್ಕಾಗಿ ಆಗ್ರಹಿಸಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಬಳಿ ಜಮಾಯಿಸಿ ಇಡೀ ರಾತ್ರಿ ಕಳೆದಿದ್ದರು.
ಕನ್ನಡಿಗರ ದೂರಿಗೆ ಕರ್ನಾಟಕದ ರಾಜಧಾನಿಯಲ್ಲೇ ಬೆಲೆ ಇಲ್ಲ, ಹಲ್ಲೆ ಮಾಡಿದವನು ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಕನ್ನಡಿಗ ಬೈಯಪ್ಪನಹಳ್ಳಿ ಠಾಣೆಯ ಒಳಗಿದ್ದಾನೆ ಎಂದು ಪೊಲೀಸರ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ. ಮೇಲ್ನೋಟಕ್ಕೆ ಮಾತ್ರವೇ ವಿಂಗ್ ಕಮಾಂಡರ್ ಮೇಲೆ ಕೇಸ್ ದಾಖಲಿಸುವುದಾಗಿ ಹೇಳಿದ್ದು, ಈವರೆಗೆ ಎಫ್‌ಐಆರ್ ದಾಖಲಿಸಿಲ್ಲ, ಅದರ ಪ್ರತಿಯನ್ನೂ ಪೊಲೀಸರು ನೀಡುತ್ತಿಲ್ಲ ಎಂದು ಕೆರಳಿದ್ದರು.

ತನ್ನ ನಾಚಿಕೆಗೇಡು ವರ್ತನೆ ಮುಚ್ಚಿಡಲು ಕನ್ನಡಿಗರ ಮೇಲೆ ಸುಳ್ಳು ಆರೋಪ ಮಾಡಿದ ಆ ಶೈಲಾದಿತ್ಯ ಬೋಸ್ ಹಾಗೂ ಆತನ ಪತ್ನಿ ಇಬ್ಬರಿಗೂ ಗಂಭೀರ ಶಿಕ್ಷೆಯಾಗಬೇಕು. ಕನ್ನಡಿಗರ ಮೇಲೆ ಸುಳ್ಳು ದೂರು ಕೊಟ್ಟಿರುವ IAF ಅಧಿಕಾರಿ ಕೂಡಲೇ ಬಂಧನವಾಗಬೇಕು. ನಡು ರಸ್ತೆಯಲ್ಲೇ ಕೊಲೆ ಪ್ರಯತ್ನ ಮಾಡಿದಕ್ಕೆ ಎಫ್‌ಐಆರ್ ಆಗಬೇಕು. ರಕ್ಷಣಾ ಇಲಾಖೆ ಆತನ ಮೇಲೆ ಕೋರ್ಟ್ ಮಾರ್ಷಲ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡಿಗನನ್ನು ಹೊಡೆದವರ ವಿರುದ್ಧ ಎಫ್‌ಐಆರ್ ಅಧಿಕೃತವಾಗಿ ಅಪ್‌ಲೋಡ್ ಮಾಡಲು ಪೋಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ. ಏಟು ತಿಂದ ಕನ್ನಡಿಗನ ವಿರುದ್ಧ ಹುನ್ನಾರ ನಡೆಯುತ್ತಿದೆ. ವಿಕಾಸ್ ಕೊಟ್ಟ ದೂರಿಗೆ ಎಫ್‌ಐಆರ್ ಮಾಡಲು ಟೆಕ್ನಿಕಲ್ ಸಮಸ್ಯೆ ಎಂದಿದ್ದು, ಮಂಗಳವಾರ ಬೆಳಿಗ್ಗೆ 10.30ರ ನಂತರ ಎಫ್‌ಐಆರ್ ಕಾಪಿ ನೀಡುವುದಾಗಿ ಪೊಲೀಸರು ಹೇಳಿದ್ದಾರೆ. ಕಾಣದ ಕೈಗಳು ಒತ್ತಡ ಹಾಕುತ್ತಿರುವುದಂತೂ ಸ್ಪಷ್ಟ, ಆದರೂ ಕರ್ನಾಟಕದ ಪೋಲಿಸರ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ತಿಳಿಸಿದ್ದಾರೆ.

ಡಿಸಿಪಿ ಹೇಳಿದ್ದೇನು?
ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ (ಪೂರ್ವ) ಡಿ. ದೇವರಾಜ್, ಈ ಘಟನೆಯು ರಸ್ತೆ ಹಿಂಸಾಚಾರದ (ರೋಡ್ ರೇಜ್) ಪ್ರಕರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಇದು ಭಾಷಾ ವಿಚಾರಕ್ಕೆ ನಡೆದಿರುವ ಗಲಾಟೆ ಅಲ್ಲ ಎಂದು ವದಂತಿಯನ್ನು ತಳ್ಳಿಹಾಕಿದ್ದಾರೆ.
ಇದು ಯಾವುದೇ ಭಾಷೆ ಅಥವಾ ಕಾರಣಕ್ಕೆ ಸಂಬಂಧಿಸಿದ ಪ್ರಕರಣವಲ್ಲ. ಬೆಂಗಳೂರಿನಲ್ಲಿ ಬಹಳ ಸಾಮಾನ್ಯವಾದ ರೋಡ್ ರೇಜ್ ಕೇಸ್ ಎನ್ನುವುದು ಸ್ಪಷ್ಟವಾಗಿದೆ. ಇದನ್ನು ಇಬ್ಬರೂ ತಪ್ಪಿಸಬಹುದಿತ್ತು. ಇಬ್ಬರ ನಡುವೆ ವಾಗ್ವಾದ ನಡೆಯುತ್ತಿರುವಾಗ ಗಲಾಟೆ ನಿಲ್ಲಿಸಲು ಅಲ್ಲಿದ್ದವರು ಪ್ರಯತ್ನಿಸಿದರು. ವಿಂಗ್ ಕಮಾಂಡರ್ ಪತ್ನಿ ಮಧುಮಿತಾ ದಾಸ್ ಕಾರು ಚಾಲನೆ ಮಾಡುತ್ತಿದ್ದಾಗ, ಈ ವ್ಯಕ್ತಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ. ಈ ಗಲಾಟೆಗೆ ಇದೇ ಮೂಲ ಕಾರಣ. ನಂತರ ಅಧಿಕಾರಿ ಕಾರಿನಿಂದ ಇಳಿದು ಜಗಳವಾಡಿದ್ದಾರೆ. ಈ ಕೇಸ್ ಸಂಬಂಧ ವಿಕಾಸ್ ಕುಮಾರ್ ಎಂಬ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಸಿಸಿಟಿವಿಯಲ್ಲೇ ಇದೆಯಲ್ಲ ಸಾಕ್ಷಿ?
ಇಬ್ಬರ ನಡುವೆ ಗಲಾಟೆ ನಡೆದಿರಬಹುದು. ಆದರೆ, ವಿಂಗ್ ಕಮಾಂಡರ್ ಸುಳ್ಳು ಕೇಸ್ ಹಾಕಿದ್ದಾನೆ. ಭಾಷೆಯ ವಿಚಾರ ಎಳೆದು ಕನ್ನಡಿಗರ ಮೇಲೆ ಆರೋಪ ಮಾಡಿದ್ದಾನೆ. ಅಸಲಿಗೆ ಆತನೇ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿದೆ. ಸಾಕ್ಷಿ ಇದ್ದರೂ ಆತನನ್ನು ಬಂಧಿಸದೆ ಬಿಟ್ಟಿರುವುದು ಏಕೆ? ಎಂದು ಕನ್ನಡಿಗರು ಪೊಲೀಸರ ಮೇಲೆ ಸಿಡಿದೆದ್ದಿದ್ದಾರೆ. ವಿಂಗ್ ಕಮಾಂಡರ್‌ನನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯೂ ನೀಡಿದ್ದಾರೆ.
ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಸಿವಿ ರಾಮನ್‌ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ನಂತರ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿ. ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೆ ಸರ್ಕಾರ ಕರ್ನಾಟಕದಲ್ಲಿದೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ. ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಐಎಎಫ್ ಹೇಳಿದ್ದೇನು?: ಬೆಂಗಳೂರಿನ ರಸ್ತೆ ಗಲಭೆ ಘಟನೆ ಸಂಬಂಧ ಭಾರತೀಯ ವಾಯುಸೇನೆ (ಐಎಎಫ್) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ನಿನ್ನೆಲ್ ಐಎಎಫ್ ಅಧಿಕಾರಿಯನ್ನು ಒಳಗೊಂಡ ದುರದೃಷ್ಟಕರ ಘಟನೆ ನಡೆದಿದೆ. ಪ್ರಕರಣವನ್ನು ತನಿಖೆ ಮಾಡಲು ಮತ್ತು ಕಾನೂನುಬದ್ಧ ಪರಿಹಾರಕ್ಕೆ ಅನುಸರಿಸಲು ಐಎಎಫ್ ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದೆ.












Click it and Unblock the Notifications