ಬ್ಯಾಂಕ್‌ಗಳಲ್ಲಿ ಕನ್ನಡ: ಎಸ್‌ಬಿಐ ಉನ್ನತ ಅಧಿಕಾರಿಗಳೊಂದಿಗೆ ಕರವೇ ಮಹತ್ವದ ಸಭೆ!
ಬೆಂಗಳೂರಿನ ಚಂದಾಪುರದಲ್ಲಿ ನಡೆದ ಘಟನೆಯ ವಿಚಾರದಲ್ಲಿ ಕನ್ನಡಿಗರಿಗೆ ಗೆಲುವಾಗಿದೆ. ಲೇಡಿ ಬ್ಯಾಂಕ್ ಮ್ಯಾನೇಜರ್‌ವರ್ಗಾವಣೆಯಾಗಿದೆ. ಅಲ್ಲದೇ ಆಕೆ ಕನ್ನಡದಲ್ಲಿಯೇ ಕ್ಷಮೆ ಕೇಳಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ, ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಕನ್ನಡ ವಿರೋಧ ಬೆಳವಣಿಗೆಗಳು ನಡೆಯುತ್ತಲ್ಲೇ ಇವೆ. ಅಲ್ಲದೇ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ನೀಡದೆ ಇರುವುದು ಬಹುದೊಡ್ಡ ಸಮಸ್ಯೆ ಆಗಿದೆ. ಇದೀಗ ಈ ಸಂಬಂಧ ಎಸ್‌ಬಿಐ ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆದಿದೆ. ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಅಧಿಕಾರಿಗಳೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಅವರು ಮಹತ್ವದ ಸಭೆಯನ್ನು ನಡೆಸಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ಚಂದಾಪುರದ ಘಟನೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉನ್ನತ ಅಧಿಕಾರಿಗಳು ಮಹತ್ವದ ಸಭೆ ಸಭೆಯೊಂದನ್ನು ಆಯೋಜಿಸಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಅವರನ್ನು ಆಹ್ವಾನಿಸಿದ್ದು. ಸ್ವಾಭಿಮಾನಿ ಕನ್ನಡಿಗರ ಪರವಾಗಿ ನಮ್ಮ ಹಕ್ಕೊತ್ತಾಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಿದೆ ಎಂದು ನಾರಾಯಣಗೌಡ.ಟಿ.ಎ ಅವರು ಹೇಳಿದ್ದಾರೆ.

ಸುಮಾರು ಮುಕ್ಕಾಲು ಗಂಟೆಯ ಕಾಲ ಎಲ್ಲ ಅಧಿಕಾರಿಗಳನ್ನು ನನ್ನ ಮಾತುಗಳನ್ನು ಆಲಿಸಿದರು ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರು. ನಮ್ಮ ಹಕ್ಕೊತ್ತಾಯಗಳ ಕುರಿತು ಚರ್ಚಿಸಿ ಹದಿನೈದು ದಿನಗಳ ಒಳಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡುವುದಾಗಿ ಅವರು ಹೇಳಿದರು. ಚಂದಾಪುರ ಶಾಖೆಯಲ್ಲಿ ನಡೆದಂಥ ಘಟನೆಗಳು ಮತ್ತೆ ಜರುಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಮಂಡಿಸಿದ ಪ್ರಮುಖ ವಿಷಯಗಳು
1.ಕನ್ನಡಿಗರಿಗೆ ಶೇ.80 ರಷ್ಟು ಉದ್ಯೋಗ ಮೀಸಲಾತಿ.
2.ಕನ್ನಡ ಮಾತನಾಡಲು ನಿರಾಕರಿಸುವ ಅಧಿಕಾರಿ - ಸಿಬ್ಬಂದಿ ವರ್ಗಾವಣೆ.
3.ಕನ್ನಡ ಭಾಷಾ ತರಬೇತಿ ಮತ್ತು ಸಾಂಸ್ಕೃತಿಕ ಸಂವೇದನೆ ಕಾರ್ಯಕ್ರಮಗಳು.
4.ಕನ್ನಡ ಜಾರಿಗೆ ನೋಡಲ್ ಅಧಿಕಾರಿಗಳ ನೇಮಕ.
5.ಕನ್ನಡ ಭಾಷಿಕರನ್ನು ಮಾತ್ರ ನೇಮಕ ಮಾಡುವ ನೀತಿ.
6.ಚಂದಾಪುರ ಘಟನೆಯಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳು.
7.ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಒದಗಿಸುವ ಖಾತರಿ.
8.ಎಸ್‌ಬಿಐನಿಂದ ಕನ್ನಡ ಭಾಷೆಯ ಜಾರಿಗೆ ಸಂಬಂಧಿಸಿದ ಸ್ಪಷ್ಟ ನೀತಿಯ ರಚನೆ.
9.ಕರ್ನಾಟಕದ ಎಸ್‌ಬಿಐ ಶಾಖೆಗಳಲ್ಲಿ ಕನ್ನಡದ ಬಳಕೆಯನ್ನು ಕಡ್ಡಾಯಗೊಳಿಸುವ ಕಾಲಮಿತಿಯ ಒಪ್ಪಂದ.
10.ಕನ್ನಡಿಗರ ಭಾವನೆಗಳಿಗೆ ಗೌರವ ನೀಡುವ ಮತ್ತು ಸ್ಥಳೀಯ ಭಾಷೆಯನ್ನು ಉತ್ತೇಜಿಸುವ ಎಸ್‌ಬಿಐನ ಬದ್ಧತೆಯ ಸಾರ್ವಜನಿಕ ಘೋಷಣೆ.
ಇನ್ನು ಇಂದಿನ ಸಭೆ ಆಶಾದಾಯಕವಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರವಲ್ಲ, ರಾಷ್ಟ್ರೀಕೃತ ಬ್ಯಾಂಕ್ ಗಳು ಮತ್ತು ಖಾಸಗಿ ಬ್ಯಾಂಕ್ ಗಳಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಅವಮಾನಗಳು ನಿಲ್ಲಬೇಕಿದೆ. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಮುಂಬರುವ ದಿನಗಳಲ್ಲಿ ವ್ಯಾಪಕವಾದ ಅಭಿಯಾನಗಳನ್ನು ನಡೆಸಲಿದೆ.
ಇವತ್ತಿನ ಸಭೆಯಲ್ಲಿ ಎಸ್ ಬಿಐ ಬೆಂಗಳೂರು ವೃತ್ತದ ಮಹಾಪ್ರಬಂಧಕರಾದ ಸುಶೀಲ್ ಕುಮಾರ್ ಸಿಂಗ್, ವೃತ್ತ ಅಭಿವೃದ್ಧಿ ಅಧಿಕಾರಿ ರಾಜೇಶ್ ಚೌರೆ, ಸಹಾಯಕ ಮಹಾ ಪ್ರಬಂಧಕರಾದ (ಸುರಕ್ಷತೆ) ಪದ್ಮನಾಭ ಕುಲಕರ್ಣಿ, ಪ್ರಬಂಧಕರಾದ ಚನ್ನಬಸವ, ಉಪಪ್ರಬಂಧಕರಾದ ಗಿರಿರಾಜ್ ಕೆ.ಎನ್ ಸೇರಿದಂತೆ ಹಲವರು ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ.












Click it and Unblock the Notifications