ಜೈಲಿನಿಂದ ಹೊರಬಂದು ಕಣ್ಣೀರು ಹಾಕಿದ ವೆಂಕಟ್
ಬೆಂಗಳೂರು, ಡಿಸೆಂಬರ್ 03 : ನಟ, ನಿರ್ದೇಶಕ ಹುಚ್ಚ ವೆಂಕಟ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. 'ನಾನು ಹುಚ್ಚ ಅಲ್ಲ, ಒಂದು ಪದ ಬಳಕೆಯಿಂದಾಗಿ ನನಗೆ ಈ ಗತಿ ಬಂದಿದೆ. ಇನ್ನು ಮುಂದೆ ಜೀವನ ಪೂರ್ತಿ ಆ ಪದ ಬಳಕೆ ಮಾಡುವುದಿಲ್ಲ' ಎಂದು ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಬುಧವಾರ ಒಕ್ಕಲಿಗರ ಹಿತಕರಕ್ಷಣಾ ಸೇನೆಯ ಅಧ್ಯಕ್ಷರಾದ ಹಾಸನ ಮೂಲದ ಮಂಜೇಗೌಡ ಅವರು, ವೆಂಕಟ್‌ಗೆ ಶ್ಯೂರಿಟಿ ನೀಡಿದರು, ಬುಧವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಿಂದ ವೆಂಕಟ್ ಅವರನ್ನು ಬಿಡುಗಡೆ ಮಾಡಲಾಯಿತು. [ಹುಚ್ಚ ವೆಂಕಟ್ ಯಾರು?]

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವೆಂಕಟ್, 'ಸಂವಿಧಾನ ಬರೆದ ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ' ಎಂದು ಹೇಳಿದರು. [ವೆಂಕಟ್ ಗೆ ಷರತ್ತು ಬದ್ಧ ಜಾಮೀನು]
ಕಣ್ಣೀರು ಹಾಕಿದ ವೆಂಕಟ್ : ಮಾಧ್ಯಮಗಳ ಜೊತೆ ಮಾತನಾಡುವಾಗ ಭಾವುಕರಾದ ವೆಂಕಟ್ 'ನನ್ನನ್ನು ಬಿಡುಗಡೆ ಮಾಡಲು ಮನೆಯವರು ಯಾರು ಬಂದಿಲ್ಲ. ಕರ್ನಾಟಕದ ಜನತೆಯಿಂದ ನಾನು ಬಿಡುಗಡೆಯಾಗಿದ್ದೇನೆ. ಮಾಧ್ಯಮಗಳು ಕಲಾವಿದರನ್ನು ಸಂದರ್ಶನ ಮಾಡುತ್ತವೆ. ಹೀಗಾಗಿ ಈ ವಿಚಾರಲ್ಲಿ ಮಾಧ್ಯಮಗಳನ್ನು ಯಾವುದೇ ಕಾರಣಕ್ಕೆ ದೂರಬೇಡಿ' ಎಂದರು. [ಅಂಬೇಡ್ಕರ್ 'ಎಕ್ಕಡ' ಅಂದಿದ್ದ ಹುಚ್ಚ ವೆಂಕಟನ ಬಂಧನ]
'ಜೈಲಿನ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಒಂದು ದಿನ ನನ್ನನ್ನು ಹುಚ್ಚ ವೆಂಕಟ್ ಎಂದು ಕರೆಯಲಿಲ್ಲ. ಆದರೆ, ನಾನು ಅತಿಯಾಗಿ ನಂಬಿದ್ದ ಮನೆಯವರೇ ನನಗೆ ಮೋಸ ಮಾಡಿದರು' ಎಂದು ಕಣ್ಣೀರು ಹಾಕಿದರು.
'ಈ ಘಟನೆಗಳಿಂದ ನಾನು ಮಾನಸಿಕವಾಗಿ ಕುಗ್ಗಿಲ್ಲ. ಸ್ವಲ್ಪ ಬೇಸರವಾಗಿದೆ. ಮುಂದಿನ ಎರಡು ವಾರದಲ್ಲಿ 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ಹಾಡಿನ ಚಿತ್ರೀಕರಣ ಆರಂಭಿಸುತ್ತೇನೆ' ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆ ಪೊಲೀಸರು ವೆಂಕಟ್‌ನನ್ನು ನವೆಂಬರ್ 19ರಂದು ಬಂಧಿಸಿದ್ದರು. ಸಿಟಿ ಸಿವಿಲ್ ಕೋರ್ಟ್ ವೆಂಕಟ್‌ಗೆ ನವೆಂಬರ್ 25ರಂದು ಜಾಮೀನು ನೀಡಿತ್ತು. ಶ್ಯೂರಿಟಿ ನೀಡುವುದು ವಿಳಂಬವಾದ ಕಾರಣ ಬಿಡುಗಡೆ ತಡವಾಯಿತು.











Click it and Unblock the Notifications