ಆಕೆ ಯಾವ ರೀತಿಯ ಸಾಧ್ವಿ?: ಪ್ರಜ್ಞಾ ಸಿಂಗ್ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್
ಮುಂಬೈ, ಡಿ. 29: ಶಿವಮೊಗ್ಗದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ ಎರಡು ಮೂರು ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಕಿಡಿಕಾರಿದ್ದಾರೆ.
ಹಿಂದೂಗಳು ತಮ್ಮ ಮನೆಗಳಲ್ಲಿ ಚಾಕುಗಳನ್ನು ಇಟ್ಟುಕೊಂಡಿರಬೇಕು. ಹುರಿತಗೊಳಿಸಿದ ಚಾಕುಗಳನ್ನು ಇಟ್ಟುಕೊಳ್ಳಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಈಗಾಗಲೇ ಕನಿಷ್ಠ ಮೂರು ದೂರುಗಳು ದಾಖಲಾಗಿವೆ.
"ಆತ್ಮರಕ್ಷಣೆ" ಮಾಡಿಕೊಳ್ಳಬೇಕು ಎಂದು ಹೇಳುವ ಸಾಧ್ವಿಗಳು ಎಂದಿಗೂ ಹಿಂಸಾಚಾರದ ಬಗ್ಗೆ ಮಾತನಾಡುವುದಿಲ್ಲ ಮತ್ತು ದ್ವೇಷ ಭಾಷಣವನ್ನು ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.

ಮುಂಬೈನಲ್ಲಿ ಕಾಂಗ್ರೆಸ್‌ನ 138 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕನ್ಹಯ್ಯಾ ಕುಮಾರ್, "ವಾಸ್ತವವಾಗಿ ಸದ್ಗುಣ ಹೊಂದಿರುವ ಜನರು ಎಂದಿಗೂ ಹಿಂಸೆಯ ಬಗ್ಗೆ ಮಾತನಾಡುವುದಿಲ್ಲ. ಅವರು ಎಂದಿಗೂ ದ್ವೇಷದ ಭಾಷೆಯನ್ನು ಬಳಸುವುದಿಲ್ಲ ಬದಲಿಗೆ ಜನರನ್ನು ವಿಭಜಿಸದಂತೆ ಒಗ್ಗೂಡಿಸಲು ಮಾತ್ರ ಮಾತನಾಡುತ್ತಾರೆ" ಎಂದಿದ್ದಾರೆ.
"ಆದರೆ ಸಂಸದೆ ಸಾಧ್ವಿ ಪ್ರಜ್ಞಾ ಸಂಪೂರ್ಣವಾಗಿ ತದ್ವಿರುದ್ಧವಾಗಿ ಮಾಡುತ್ತಿದ್ದಾರೆ, ಅವರು ಮನೆಯಲ್ಲಿ ತೀಕ್ಷ್ಣವಾದ ಚಾಕುಗಳನ್ನು ಇಟ್ಟುಕೊಳ್ಳುವಂತೆ ಹೇಳುತ್ತಿದ್ದಾರೆ. ಅವರು ಯಾವ ರೀತಿಯ ಸಾಧ್ವಿ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಜ್ಞಾ ಠಾಕೂರ್, ತರಕಾರಿ ಕತ್ತರಿಸಲು ಬಳಸುವ ಚಾಕುವಿನಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು ಎಂದಿದ್ದರು.

ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೀಗೆ ಹಿಂಸಾಚಾರದ ಬಗ್ಗೆ ಮಾತನಾಡುವ ಮೂಲಕ ರಾಷ್ಟ್ರದ ಭದ್ರತೆಯ ಬಗ್ಗೆ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಕನ್ಹಯ್ಯಾ ಕುಮಾರ್ ವ್ಯಂಗ್ಯವಾಡಿದ್ದಾರೆ.
"ಅವರು ಹಿಂಸಾಚಾರದ ಬಗ್ಗೆ ಮಾತನಾಡಿ ದೇಶದ ಗೃಹ ಸಚಿವರನ್ನು ಅಪಹಾಸ್ಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ದೇಶದಲ್ಲಿ ಭದ್ರತೆಯನ್ನು ಖಚಿತಪಡಿಸುವುದು ಗೃಹ ಸಚಿವರ ಕರ್ತವ್ಯವಾಗಿದೆ. ಹಾಗಾಗಿ ಸಾಧ್ವಿ ಗೃಹ ಸಚಿವರು ನಿಷ್ಪ್ರಯೋಜಕ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ, ಆದ್ದರಿಂದ ನಾವೆಲ್ಲರೂ ನಮ್ಮ ಚಾಕುಗಳನ್ನು ಹರಿತಗೊಳಿಸಬೇಕಾಗಿದೆ" ಎಂದು ಕನ್ಹಯ್ಯಾ ಕುಮಾರ್ ವ್ಯಂಗ್ಯವಾಡಿದ್ದಾರೆ.
"ಇಲ್ಲಿ ನಿಂತಿರುವ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ನಾನು ಕೇಳುವುದೇನೆಂದರೇ ಚಾಕುವನ್ನು ಹರಿತಗೊಳಿಸಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯವಾದರೇ ಭದ್ರತಾ ಪಡೆಗಳು ಮತ್ತು ಕಾನೂನು ಏನು ಮಾಡುತ್ತದೆ..? ಗೃಹ ಸಚಿವರನ್ನು ನಾವು ಏಕೆ ನೇಮಿಸಿದ್ದೇವೆ..? ಕೇವಲ ಅವರ ಮಗನನ್ನು ಬಿಸಿಸಿಐ ಮುಖ್ಯಸ್ಥರನ್ನಾಗಿ ಮಾಡಲು ಮಾತ್ರವೇ'' ಎಂದು ಕಿಡಿಕಾರಿದ್ದಾರೆ.
ಈ ವೇಳೆ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯನ್ನು ಶ್ಲಾಘಿಸಿರುವ ಅವರು, ರಾಷ್ಟ್ರದ ಅಡಿಪಾಯ ಮತ್ತು ಐಕ್ಯತೆಯನ್ನು ಉಳಿಸಲು ರಾಹುಲ್ ಗಾಂಧಿ ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನು, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೂಡ ಪ್ರಜ್ಞಾ ಠಾಕೂರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
"ಸಂಸದರೊಬ್ಬರು ಇಂತಹ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ, ಆಕೆ ಈಗಾಗಲೇ ಭಯೋತ್ಪಾದಕ ಪ್ರಕರಣದ ಆರೋಪಿ, ಕರ್ನಾಟಕ ಏಕೆ ಇಂತಹ ವಾತಾವರಣವನ್ನು ಪ್ರೋತ್ಸಾಹಿಸುತ್ತಿದೆ ಎಂದು ನನಗೆ ತಿಳಿದಿಲ್ಲ, ಇದರ ವಿರುದ್ಧ ನಾವು ಕಾನೂನು ದೂರು ನೀಡುತ್ತೇವೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.












Click it and Unblock the Notifications