KIA ತಲುಪುವ ಹೊಸ ಮಾರ್ಗ ಟೆಕ್ ಕಾರಿಡಾರ್ ಕೆಲಸ ಶೀಘ್ರವೇ ಪೂರ್ಣಗೊಳ್ಳಲಿದೆ; ಬಿಬಿಎಂಪಿ
ಬೆಂಗಳೂರು, ನವೆಂಬರ್ 10: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಕಾಡುಬೀಸನಹಳ್ಳಿ, ಬಳಗೆರೆ ಮಾರ್ಗವಾಗಿ ನಿರ್ಮಾಣವಾಗುತ್ತಿರುವ ಪರ್ಯಾಯ ಮಾರ್ಗವನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ತಿಳಿಸಿದೆ.
ನಗರದ ಮಹದೇವಪುರ ವಲಯದಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೊಸ ಮಾರ್ಗ (ಟೆಕ್ ಕಾರಿಡಾರ್ ಯೋಜನೆ) ಇದಾಗಿದ್ದು, ಕೆಲವೇ ತಿಂಗಳುಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಗ್ರ ಅಭಿವೃದ್ಧಿ ಯೋಜನೆಯಡಿ ಈ ಪರ್ಯಾಯ ಹೊಸ ರಸ್ತೆ ಯೋಜನೆಯು 2018 ರಲ್ಲಿ ಆರಂಭವಾಯಿತು. ನಿಗದಿತ ಅವಧಿಯಲ್ಲಿ ಮುಗಿಯದೇ ಕೋವಿಡ್ ಸೇರಿದಂತೆ ಕೆಲವು ಅಡೆತಡೆಗಳಿಗೆ ಸಿಲುಕಿತು. ಹೀಗಾಗಿ ಕಾಮಗಾರಿ ಪೂರ್ಣಗೊಳಿಸುವುದು ತಡವಾಯಿತು.

ಈ ನೂತನ ರಸ್ತೆ ವಿಸ್ತರಣೆಯು ಕಾಡುಬೀಸನಹಳ್ಳಿ ಮತ್ತು ಗುಂಜೂರಿನಲ್ಲಿ ಬಿಡಿಎಯ ಪೆರಿಫೆರಲ್ ರಿಂಗ್ ರಸ್ತೆ ನಡುವೆ ಸಂಪರ್ಕ ಸಾಧಿಸುತ್ತದೆ. ಒಟ್ಟು 5.3 ಕಿಲೋ ಮೀಟರ್ ಇದ್ದು, ಭೋಗನಹಳ್ಳಿ, ಪಣತ್ತೂರು ಮತ್ತು ವರ್ತೂರು ಗ್ರಾಮಗಳನ್ನು ಸಂಪರ್ಕಿಸುತ್ತದೆ. ಕಾಮಗಾರಿ ಆರಂಭವಾದ 4ವರ್ಷದಲ್ಲಿ ಈವರೆಗೆ 3.5 ಕಿಲೋ ಮೀಟರ್ ರಸ್ತೆ ನಿರ್ಮಾಣ ಮುಗಿದಿದೆ.
ಗುಂಜುರಪಾಳ್ಯ ಸಮೀಪದ ಅರಣ್ಯ ಭೂಮಿ ಮತ್ತು ರೈಲ್ವೆ ಕ್ರಾಸಿಂಗ್‌ನಲ್ಲಿ ಕಾಮಗಾರಿ ಹಲವು ಕಾರಣಗಳಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಹೊಸ ರಸ್ತೆ ಮಾರ್ಗದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ ಸರ್ವೆ ನಂಬರ್‌ಗಳಲ್ಲಿನ ಸಣ್ಣ ನಿವೇಶನಗಳ ಮಾಲೀಕರು ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಿ ಕೆಲಸ ಮುಗಿಸಿದರೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತ್ವರಿತಗತಿಯಲ್ಲಿ ನಗರದಿಂದ ತಲುಪಬಹುದಾಗಿದೆ.

ಹೊಸ ಮಾರ್ಗದಲ್ಲಿ ವಾಣಿಜ್ಯ ಚಟುವಟಿಕೆ ಸೃಷ್ಟಿ
ಯೋಜನೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇವಲ 20 ಕೋಟಿ ರೂ. ನೀಡಿದೆ. ಯೋಜನೆಯಿಂದ ಈ ಭಾಗದಲ್ಲಿ ಉತ್ತಮ ಸಾರಿಗೆ ಸಂಪರ್ಕ ಸಾಧ್ಯವಾಗುತ್ತದೆ. ಜೊತೆಗೆ ಇಲ್ಲಿ ಸಾಫ್ಟ್‌ವೇರ್ ಕಂಪನಿ, ಹೋಟೆಲ್‌ಗಳು ಮತ್ತು ಇನ್ನಿತರ ವಾಣಿಜ್ಯ ಯೋಜನೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಈ ಮಾರ್ಗದಿಂದ ಎಲೆಕ್ಟ್ರಾನಿಕ್ಸ್ ಸಿಟಿ-ಎಚ್‌ಎಸ್‌ಆರ್, ಸರ್ಜಾಪುರ, ಕೋರಮಂಗಲ, ವರ್ತೂರು, ಗುಂಜೂರು ಮತ್ತು ಮಾರತಹಳ್ಳಿಯ ಜನರು ಏರ್‌ಫೋರ್ಟ್ ತಲುಪಲು ಮೇಖ್ರಿ ವೃತ್ತ ರಸ್ತೆ ಮಾರ್ಗದ ಅವಲಂಬನೆ ಕಡಿಮೆ ಮಾಡಲಿದ್ದಾರೆ ಎಂದರು.
ಸರ್ಜಾಪುರ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಪ್ರಯಾಣಿಕರು ಈ ಮಾರ್ಗವನ್ನು ಪ್ರವೇಶಿಸಿ, ಕಾಡುಗೋಡಿಗೆ ತಲುಪಿ ಅಲ್ಲಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಟಂನಲ್ಲೂರು ತಲುಪಬಹುದು. ನಂತರ ಬೂದಿಗೆರೆ ಕ್ರಾಸ್ ಮೂಲಕ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋಗಬಹುದಾಗಿದೆ. ಆದರೆ ಇದಕ್ಕೆ ಬಾಕಿ ಇರುವ ಭೂ ಮಾಲೀಕರು ಪರಿಹಾರ ವಿತರಣೆ ಸೇರಿದಂತೆ ಅಗತ್ಯ ಕೆಲಸ ಮುಗಿಸಬೇಕಿದೆ.












Click it and Unblock the Notifications