ಬೆಂಗಳೂರು ಉಪನಗರ ರೈಲು: ಕನಕ, ಮಲ್ಲಿಗೆ ಕಾರಿಡಾರ್ ಕಾಮಗಾರಿ ಸ್ಥಗಿತ, K-RIDE ಶೀಘ್ರವೇ ಮರು ಟೆಂಡರ್
ಬೆಂಗಳೂರು, ಅಕ್ಟೋಬರ್ 07: ಸಮಾರು ಒಂದು ದಶಕದಿಂದಲೂ ಕುಂಟುತ್ತ ಸಾಗಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ (BSRP) ಪರಿಷ್ಕೃತ ಟೆಂಡರ್ ಆಹ್ವಾನಿಸಲು ಅನುಮತಿ ದೊರೆತಿದೆ. ಗುತ್ತಿಗೆ ಕಂಪನಿ ಹಾಗೂ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಮಧ್ಯ ಉಂಟಾದ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕೆ-ರೈಡ್ ಮತ್ತೆ ರದ್ದಾದ ಎರಡು ಉಪನಗರ ರೈಲು ಮಾರ್ಗಗಳಿಗೆ ಟೆಂಡರ್ ಆಹ್ವಾನಿಸಿದೆ.
ಹೆಚ್ಚುತ್ತಿರುವ ಬೆಂಗಳೂರಿನ ಜನ ದಟ್ಟಣೆಗೆ ಪರಿಹಾರವಾಗಿ ಈ ಉಪನಗರ ರೈಲ್ವೆ ಜಾಲ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಒಟ್ಟು ನಾಲ್ಕು ಕಾರಿಡಾರ್ ಮೂಲಕ ಒಟ್ಟು 148 ಕಿಲೋ ಮೀಟರ್ ಯೋಜನೆ ಸಾಕಾರಗೊಳಿಸುವ ಉದ್ದೇಶ ಹೊಂದಲಾಗಿದೆ. ಇದರಲ್ಲಿ ಎರಡು ಕಾರಿಡಾರ್‌ಗಳನ್ನು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಕಂಪನಿಯು ಎಲ್ ಆಂಡ್ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

ಎರಡು ಕಾರಿಡಾರ್ ಕಾಮಗಾರಿಗೆ ಸ್ಥಗಿತ, ಮರು ಟೆಂಡರ್
ಎಲ್ ಆಂಡ್ ಟಿ ಕಂಪನಿಯು ಚಿನ್ನಬಾಣಾವರ-ಬೈಯಪ್ಪನಹಳ್ಳಿ (25km) "ಮಲ್ಲಿಗೆ' ಕಾರಿಡಾರ್ ಗುತ್ತಿಗೆಯನ್ನು 2022ರಲ್ಲಿ ಹಾಗೂ ಹೀಲಲಿಗೆ-ರಾಜಾನುಕುಂಟೆ ಮಧ್ಯದ (46km) "ಕನಕ' ಕಾರಿಡಾರ್ ಗುತ್ತಿಗೆಯನ್ನು 2023ರಲ್ಲಿ ಪಡೆದಿತ್ತು. ಗುತ್ತಿಗೆದಾರರ ಕೋರಿಕೆ ಮೇರೆಗೆ ನಿರ್ಮಾಣ ಗಡುವನ್ನು 2026ಕ್ಕೆ ವಿಸ್ತರಿಸಲಾಗಿತ್ತು. ಈ ಮಧ್ಯೆ ಯೋಜನೆಗೆ ಬೇಕಾದ ಅಗತ್ಯ ಭೂಮಿಯು ಹಸ್ತಾಂತರ ವಿಚಾರದಲ್ಲಿ ಕೆ-ರೈಡ್ ಮತ್ತು ಎಲ್ ಆಂಡ್ ಟಿ ಕಂಪನಿ ಮಧ್ಯೆ ಭಿನ್ನಾಬಿಪ್ರಾಯ ಉಂಟಾಗಿತ್ತು. ಹೀಗಾಗಿ 2025ರ ಮಾರ್ಚ್ ಹೊತ್ತಿಗೆ ಗುತ್ತಿಗೆ ಕಂಪನಿ ಕಾಮಗಾರಿ ಕೈ ಬಿಟ್ಟಿತು.
ಎಲ್ ಆಂಡ್ ಟಿ ಕಂಪನಿಯು ಕಾಮಗಾರಿ ಸ್ಥಗಿತಗೊಳಿಸಿದ್ದಲ್ಲೇ ಗುತ್ತಿಗೆ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿತ್ತು. ಇದು ಮುಂದುವರಿದ ಬೆನ್ನಲ್ಲೆ ಉಪನಗರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೆ-ರೈಡ್‌ಗೆ ಟೆಂಡರ್ ಆಹ್ವಾನಿಸಿ ಅಧಿಕೃತ ಅನುಮತಿ ನೀಡಿದ್ದಾರೆ. ಹೀಗಾಗಿ ಈ ಎರಡು ಕಾರಿಡಾರ್‌ಗಳಿಗೆ ಮೂರು ಹಂತಗಳಲ್ಲಿ ಶೀಘ್ರವೇ ಟೆಂಡರ್ ಕರೆಯುವ ಸಾಧ್ಯತೆ ಇದೆ.
ಗುತ್ತಿಗೆ ಕಂಪನಿ ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆ
ಇನ್ನೂ ಯೋಜನೆ ಗುತ್ತಿಗೆ ಪಡೆದು ಸ್ಥಗಿತಗೊಳಿಸಿರುವ ಎಲ್ ಆಂಡ್ ಟಿ ಕಂಪನಿಯು ಮತ್ತೆ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆ, ಬೇಡವೆ ಎಂಬ ಚರ್ಚೆಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಕಪ್ಪು ಪಟ್ಟಿಗೆ ಸೇರಿಸಲು ಸಹ ಚರ್ಚೆಗಳು ನಡೆದಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಇದೀಗ ಟೆಂಡರ್ ಪ್ರಕ್ರಿಯೆ ಆಗಿ, ನಿಂತಿರುವ ಕೆಲಸ ಮತ್ತೆ ಶುರುವಾಗಿ ಅದು ಪೂರ್ಣಗೊಳ್ಳವ ಹೊತ್ತಿಗೆ ಯೋಜನೆ ಅನುಷ್ಠಾನ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ.












Click it and Unblock the Notifications