ಉಪ ಚುನಾವಣೆ; ಕೆ.ಆರ್.ಪುರದಲ್ಲಿ ಮತ್ತೆ ಬೈರತಿ ಗೆಲುವು
ಬೆಂಗಳೂರು, ಡಿಸೆಂಬರ್ 9: ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಅಂತಿಮಗೊಂಡಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದ, ಬಿ.ಎ.ಬಸವರಾಜು (ಬೈರತಿ ಬಸವರಾಜ್) ಅವರು ವಿಜಯದ ನಗೆ ಬೀರುವಲ್ಲಿ ಸಫಲರಾಗಿದ್ದಾರೆ. ಅವರು 63,405 ರ ಭಾರೀ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಬೈರತಿ ಬಸವರಾಜ್ ಒಟ್ಟು 1,39,833 ಸಾವಿರ ಮತಗಳನ್ನು ಪಡೆದರೆ, ಅವರ ವಿರುದ್ಧ ಸ್ಪರ್ಧಿಸಿದ್ದ, ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನ ಎಂ.ನಾರಾಯಣ ಸ್ವಾಮಿ ಅವರು ಸೋಲು ಕಂಡಿದ್ದು, ಅವರು 76,428 ಮತಗಳ್ಳನ್ನಷ್ಟೇ ಪಡೆಯಲು ಸಫಲರಾಗಿದ್ದಾರೆ. ಸಿ.ಕೃಷ್ಣಮೂರ್ತಿ ಅವರು 20,048 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಬಿಬಿಎಂಪಿಯ ಪೂರ್ವ ಹೆಬ್ಬಾಗಿಲಿನಂತಿರುವ ಕೆ ಆರ್ ಪುರ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ. ಬೈರತಿ ಬಸವರಾಜ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪ ಚುನಾವಣೆಗೆ ಕಾರಣರಾದರು.
2018 ರ ವಿಧಾನಸಭೆ ಚುನಾವಣೆಯಲ್ಲಿ ಬೈರತಿ ಬಸವರಾಜ್ ಅವರು ಕಾಂಗ್ರೆಸ್‌ನಿಂದ ಬಿಜೆಪಿಯ ನಂದೀಶ್ ರೆಡ್ಡಿ ವಿರುದ್ಧ ಸ್ಪರ್ಧಿಸಿದ್ದಾಗ, 1,34,404 ಮತಗಳನ್ನು ಪಡೆದಿದ್ದರು. ಆಗ ಅವರ ಗೆಲುವಿನ ಅಂತರ 32,729 ಆಗಿತ್ತು. ಈಗ ನಂದೀಶ್ ರೆಡ್ಡಿ ಅವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.












Click it and Unblock the Notifications