ಹಲ್ಲೆಗೊಳಗಾದ ಜ್ಯೋತಿ ಉದಯ್ ಆರೋಗ್ಯದಲ್ಲಿ ಸುಧಾರಣೆ
ಬೆಂಗಳೂರು, ನ. 20 : ಮಂಗಳವಾರ ಕಾರ್ಪೋರೇಷನ್ ಬ್ಯಾಂಕ್‌ನ ಎಟಿಎಂನಲ್ಲಿ ಹಲ್ಲೆಗೊಳಗಾಗಿದ್ದ ಕಾರ್ಪೋರೇಷನ್ ಬ್ಯಾಂಕ್‌ನ ವ್ಯವಸ್ಥಾಪಕಿ ಜ್ಯೋತಿ ಉದಯ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಜ್ಯೋತಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕೆಲವು ದಿನಗಲ್ಲಿ ಸುಧಾರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಬುಧವಾರ ಬಿಜಿಎಸ್ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆಸ್ಪತ್ರೆಯ ವಿಭಾಗದ ಮುಖ್ಯಸ್ಥ ಡಾ.ಎನ್.ಕೆ.ವೆಂಕಟರಮಣ, ಮಂಗಳವಾರ ಜ್ಯೋತಿ ಅವರನ್ನು ಆಸ್ಪತ್ರೆಗೆ ಕರೆ ತಂದಾಗ ಅವರು ಅಧಿಕ ರಕಸ್ತಸ್ರಾವದಿಂದ ಬಳಲುತ್ತಿದ್ದರು. ಬುಧವಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ಹೇಳಿದರು.

ಮಚ್ಚಿನಿಂದ ಹಲ್ಲೆ ಮಾಡಿದ್ದರಿಂದ ಜ್ಯೋತಿ ಅವರ ತಲೆಗೆ ಪೆಟ್ಟಾಗಿತ್ತು. ತಲೆಯ ಭಾಗದ ಒಂದು ಮೂಳೆ ಮರಿದು ಮೆದುಳಿಗೆ ಚುಚ್ಚಿಕೊಂಡಿತ್ತು. ಸದ್ಯ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದೇವೆ ಎಂದು ತಿಳಿಸಿದರು. ಜ್ಯೋತಿ ಅವರು ಬಲಗೈ, ಬಲಗಾಲು ಸ್ವಾಧೀನ ಕಳೆದುಕೊಂಡಿದ್ದಾರೆ. ಅವರ ಮೂಗು ಮತ್ತು ತುಟಿಯ ಮೇಲ್ಭಾಗ ತುಂಡಾಗಿತ್ತು. ಪ್ಲಾಸ್ಟಿಕ್ ಸರ್ಜರಿ ನಡೆಲಾಗಿದೆ ಎಂದು ವೆಂಕಟರಮಣ ತಿಳಿಸಿದರು.
ಔರಾದ್ಕರ್ ಭೇಟಿ : ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಬುಧವಾರ ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡಿ ಜ್ಯೋತಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಜ್ಯೋತಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದ ಸ್ಥಿತಿ ಗಂಭೀರವಾಗಿತ್ತು. ಆದರೆ ಈಗ ಅವರ ಆರೋಗ್ಯದಲ್ಲಿ ಅಲ್ಪ ಪ್ರಮಾಣದ ಚೇತರಿಗೆ ಕಾಣಿಸುತ್ತಿದೆ. ತೀವ್ರ ರಕ್ತ ಸ್ರಾವದಿಂದಾಗಿ ಅವರು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಯ ಪತ್ತೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಬೇರೆ ರಾಜ್ಯಗಳಿಗೂ ಸಹ ಪೊಲೀಸರ ತಂಡವನ್ನು ರವಾನಿಸಲಾಗಿದೆ ಎಂದು ಔರಾದ್ಕರ್ ತಿಳಿಸಿದರು.












Click it and Unblock the Notifications