ಆಮ್ ಆದ್ಮಿ ಪಕ್ಷದ ಚಳವಳಿಗೆ ಅನಂತಮೂರ್ತಿ ಬೆಂಬಲ
ಬೆಂಗಳೂರು, ಏ.1: ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಪರ ಪ್ರಚಾರಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಇಳಿಯುತ್ತಿದ್ದಂತೆ ಮತ್ತೊಬ್ಬ ಹಿರಿಯ ಸಾಹಿತಿ ಯುಆರ್ ಅನಂತಮೂರ್ತಿ ಅವರು ಪರ್ಯಾಯ ರಾಜಕೀಯ ರಂಗ ಸ್ಥಾಪನೆ ಬಗ್ಗೆ ಮಾತನಾಡಿದ್ದಾರೆ.
ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಭಾನುವಾರ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ಅವರೊಂದಿಗೆ ನಗರದ ವಿವಿಧೆಡೆ ಸಂಚರಿಸಿ, ಮತ ಯಾಚಿಸಿದ್ದನ್ನು ಇಲ್ಲಿ ಓದಿರುತ್ತೀರಿ. ಈಗ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ಅವರು ತಮ್ಮ ರಾಜಕೀಯ ನಿಲುವನ್ನು ಪ್ರಕಟಿಸಿದ್ದಾರೆ. ಅನಂತಮೂರ್ತಿ ಅವರು ಈ ಬಾರಿ ಯಾವ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬುದರ ಬಗ್ಗೆ ಸುಳಿವು ಸಿಕ್ಕಿದೆ.
ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಅವರ ಬಿಜೆಪಿ, ಸೋನಿಯಾ ಗಾಂಧಿ ಅವರ ಕಾಂಗ್ರೆಸ್ ವಿರೋಧಿಸುವ ಆಮ್ ಆದ್ಮಿ ಪಕ್ಷ, ಜನತಾದಳ(ಸಂಯುಕ್ತ), ಪ್ರಾದೇಶಿಕ ಪಕ್ಷಗಳು ಒಂದುಗೂಡಿ ಪರ್ಯಾಯ ಶಕ್ತಿಯಾಗಿ ಬೆಳೆಯಬೇಕಿದೆ ಎಂದು ಡಾ. ಯುಆರ್ ಎ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಆಮ್ ಆದ್ಮಿ ಪಕ್ಷವನ್ನು ಬಲವಾಗಿ ಬೆಂಬಲಿಸುತ್ತೇನೆ. ಆದರೆ, ಆಮ್ ಆದ್ಮಿ ಪಕ್ಷದ ಚಳವಳಿಗೆ ಮಾತ್ರ ನನ್ನ ಬೆಂಬಲ. ಪಕ್ಷವಾಗಿ ಎಎಪಿಯನ್ನು ನಾನು ಬೆಂಬಲಿಸಲಾರೆ. ಎಎಪಿ ಚಳವಳಿಗಳು ಜಡ್ಡುಗಟ್ಟಿರುವ ಭಾರತೀಯ ರಾಜಕೀಯ ಪರಿಸ್ಥಿತಿಯನ್ನು ತಿಳಿಗೊಳಿಸುವ ಆಶಾಕಿರಣವಾಗಿ ಇನ್ನೂ ಬೆಳೆಯಬೇಕಿದೆ ಎಂದಿದ್ದಾರೆ.
ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಳನದ ಸತ್ವವನ್ನು ಆಮ್ ಆದ್ಮಿ ಪಕ್ಷ ಮೈಗೂಡಿಸಿಕೊಂಡಿದೆ. ಪ್ರಜ್ಞಾವಂತರಿಂದಲೇ ರಾಜಕೀಯ ಪರಿಸ್ಥಿತಿ ಹದಗೆಡುತ್ತಿದೆ. ಅಣ್ಣಾ ಹಜಾರೆ ಅವರು ರಾಜಕಾರಣಿಗಳಂತೆ ಕುತಂತ್ರ ಮಾಡಿಲ್ಲ, ಬುದ್ಧಿವಂತರನ್ನು ಬಳಸಿಕೊಂಡು ರಾಜಕೀಯ ಮಾಡಿಲ್ಲ. ಬುದ್ಧಿಜೀವಿಗಳಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಡಾ. ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಜನರ ಮನಸ್ಸಿನಲ್ಲಿ ಭ್ರಷ್ಟಾಚಾರ ಎಂಬುದು ವ್ಯವಸ್ಥೆಯ ಭಾಗ ಎಂದು ವಿಷಬೀಜ ಬಿತ್ತುವಲ್ಲಿ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ. ಬರೀ ಮಾತುಗಾರಿಕೆಯೇ ಇಲ್ಲಿ ಪ್ರಧಾನವಾಗಿದೆ. ಕಾರ್ಯತಃ ಯಾರೊಬ್ಬರೂ ಹೇಳಿಕೆಗಳನ್ನು ಅನುಷ್ಠಾನಗೊಳಿಸುವುದಿಲ್ಲ. ಹೀಗಾಗಿ ಜನ ಸಾಮಾನ್ಯರ ಅರಿವಿನ ಕೊರತೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಅನಂತಮೂರ್ತಿ ಹೇಳಿದರು.












Click it and Unblock the Notifications