ಕುಮಾರಸ್ವಾಮಿ-ವಿಶ್ವನಾಥ್ ಭೇಟಿ: ರಾಜೀನಾಮೆ ಕುರಿತು ಚರ್ಚೆ?
ಬೆಂಗಳೂರು, ಜೂನ್ 03: ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಇಂದು ಭೇಟಿ ಆಗಿದ್ದು, ರಾಜೀನಾಮೆ ಕೊಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಬಗ್ಗೆ ಈ ಇಬ್ಬರೂ ನಾಯಕರು ಮಾತನಾಡಿದ್ದಾರೆ ಎನ್ನಲಾಗಿದೆ. ಇಬ್ಬರೂ ನಾಯಕರು ಸುಮಾರು 45 ನಿಮಿಷಗಳ ವರೆಗೂ ಸಭೆ ನಡೆಸಿದ್ದಾರೆ.
ಮತ್ತೊಂದು ಮೂಲದ ಪರ ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ತ್ಯಜಿಸುವ ನಿರ್ಧಾರ ತಳೆದಿದ್ದು, ಅದರ ಬಗ್ಗೆ ಇಂದು ಕುಮಾರಸ್ವಾಮಿ ಅವರ ಜೊತೆಗೆ ಚರ್ಚಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ವಿಶ್ವನಾಥ್ ಅವರು ಜೆಡಿಎಸ್ ಪಕ್ಷದ ವಿರುದ್ಧವೇ ಇತ್ತೀಚೆಗಷ್ಟೆ ಸಿಡಿದೆದ್ದಿದರು, ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಸಮಯದಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಲಿಲ್ಲವೆಂಬುದು ಅವರ ದೂರಾಗಿತ್ತು.

ಜೆಡಿಎಸ್‌ನಲ್ಲಿ ಹಣವಷ್ಟೆ ಮುಖ್ಯ ಎಂದಿದ್ದರು ವಿಶ್ವನಾಥ್
ಜೆಡಿಎಸ್ ಪಕ್ಷದಲ್ಲಿ ಹಣಕ್ಕಷ್ಟೆ ಮಹತ್ವ, ಮುಖಂಡರು, ಕಾರ್ಯಕರ್ತರು ಎಲ್ಲರೂ ಹಣಕ್ಕೆ ಕಾತರರಾಗಿದ್ದಾರೆ ಎಂದು ನೇರವಾಗಿಯೇ ಪಕ್ಷದ ವಿರುದ್ಧ ಆರೋಪಗಳನ್ನು ಮಾಡಿದ್ದರು. ಜೆಡಿಎಸ್ ದುರಹಂಕಾರದ ಪಕ್ಷವೆಂದು ವಿಶ್ವನಾಥ್ ಜರಿದಿದ್ದರು.

ಪಕ್ಷದ ವರಷ್ಟರ ಬಗ್ಗೆ ಅಸಮಾಧಾನ ಹೊರಹಾಕಿದ್ದರು
ಪಕ್ಷದ ವರಿಷ್ಟರ ಬಗ್ಗೆ ಅಸಮಾಧಾನಗೊಂಡು ವಿಶ್ವನಾಥ್ ಅವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ಇಂದು ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿದೆ. ನಾಳೆ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರ ಸಭೆ ಕರೆದಿದ್ದು, ಇದೇ ವಿಷಯವನ್ನು ನಾಳೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಮತ್ತು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಈ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವು ಯಾವ ರೀತಿಯ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂಬುದನ್ನೂ ಇಬ್ಬರೂ ಮುಖಂಡರು ಚರ್ಚಿಸಿದ್ದಾರೆ ಎನ್ನಲಾಗಿದೆ.

ನಿಖಿಲ್-ಎಚ್.ವಿಶ್ವನಾಥ್ ಭೇಟಿ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಇದೇ ದಿನ ನಿಖಿಲ್ ಕುಮಾರಸ್ವಾಮಿ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ನಿಖಿಲ್, ಹಿರಿಯ ನಾಯಕರು, ರಾಜಕಾರಣದ ಒಳ-ಹೊರಗನ್ನು ಚೆನ್ನಾಗಿ ತಿಳಿದುಕೊಂಡಿರುವ ನಮ್ಮ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ವಿಶ್ವನಾಥ್ ಅವರನ್ನು ಇವತ್ತು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿ, ಅವರಿಂದ ಮಾರ್ಗದರ್ಶನ ಪಡೆದುಕೊಂಡೆ. ರಾಜಕಾರಣದಲ್ಲಿ ಈಗ ತಾನೆ ಕಾಲಿಡುತ್ತಿರುವ ನನ್ನಂಥ ಯುವ ಕಾರ್ಯಕರ್ತರಿಗೆ, ಪಕ್ಷದ ಎಲ್ಲ ಹಿರಿಯರ, ನಾಯಕರ ಸಲಹೆ, ಸೂಚನೆಗಳು, ಆಶೀರ್ವಾದ, ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದಿದ್ದಾರೆ.












Click it and Unblock the Notifications