'ರಾಜೀನಾಮೆ ಕೊಟ್ಟ ಶಾಸಕರಿಗೆ ಕ್ಯಾಕರಿಸಿ ಕ್ಯಾಕರಿಸಿ ಉಗೀರಿ'
ಬೆಂಗಳೂರು, ಜುಲೈ 08: 'ರಾಜೀನಾಮೆ ಕೊಟ್ಟು ಹೋಗಿರೋ ಶಾಸಕರ್ಗೆ ಕ್ಯಾಕರಿಸಿ, ಕ್ಯಾಕರಿಸಿ, ಕ್ಯಾಕರಿಸಿ ಉಗೀರಿ ಮಖಕ್ಕೆ' ಹೀಗೆಂದು ಭಾರಿ ಆಕ್ರೋಶ ವ್ಯಕ್ತಪಡಿಸಿದರು ಅರಸಿಕೆರೆ ಶಾಸಕ ಶಿವಲಿಂಗೇಗೌಡ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ತಮ್ಮ ಎಂದಿನ ಗ್ರಾಮ್ಯ ಭಾಷೆಯಲ್ಲಿಯೇ ಅತೃಪ್ತ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಆ ವಿಶ್ವನಾಥ್ ಅದೇನು ಮಣ್ಣು ತಿನ್ನೋಕೆ ಮುಂಬೈಗೆ ಹೋಗಿದ್ದಾರೋ ಗೊತ್ತಿಲ್ಲ, ಶಾಸಕಾಂಗ ಸಭೆಯಲ್ಲಿ 'ದೇವೇಗೌಡರೇ ನನಗೆ ಪುನರ್ಜನ್ಮ ಕೊಟ್ಟರು, ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರು' ಎಂದೆಲ್ಲಾ ಹೇಳಿ ಈಗ ಮಣ್ಣು ತಿನ್ನುವ ಕೆಲಸ ಮಾಡಿದ್ದಾರೆ ಎಂದರು.

ನೀವು ಮಾಧ್ಯಮದವರು, ಕೇವಲ ಇಲ್ಲಿನ ರಾಜಕಾರಣಿಗಳನ್ನು ಮಾತ್ರ ತೋರಿಸುವುದಲ್ಲ, ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರನ್ನು ಕ್ಯಾಕರಿಸಿ, ಕ್ಯಾಕರಿಸಿ, ಕ್ಯಾಕರಿಸಿ ಮುಖಕ್ಕೆ ಉಗಿಯಿರಿ ಎಂದು ಹೇಳಿದರು.
ಜೆಡಿಎಸ್ ನವರೂ ಹೋಗಿದ್ದಾರಲ್ಲ? ಎಂಬ ಪ್ರಶ್ನೆಗೆ ಯಾವ ಪಕ್ಷದವರಾದರೆ ಏನಂತೆ, ಜನರು ಕೊಟ್ಟ ತೀರ್ಪನ್ನು ಧಿಕ್ಕರಿಸಿದವರೆಲ್ಲಾ ಭ್ರಷ್ಟರೇ ಎಂಬರ್ಥದಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಸಮಸ್ಯೆ ಇದ್ದರೆ ವಿಧಾನಸೌಧದಲ್ಲಿ ಕೇಳಲಿ ಅದು ಬಿಟ್ಟು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುವುದೇ ಎಂದು ಹೇಳಿದರು.
ಬಿಜೆಪಿ ಪಕ್ಷದ ಮೇಲೂ ಹರಿಹಾಯ್ದ ಶಿವಲಿಂಗೇಗೌಡ ಅವರು, ಅವರೇನು ರಾಜಕಾರಣಿಗಳೋ ಅಥವಾ ಯಾರೋ ಕಾಣೆ, ಸರ್ಕಾರದ ಮೇಲೆ ಅಸಮಾಧಾನ ಇದ್ದರೆ ವಿಧಾನಸೌಧದಲ್ಲಿ ಕತ್ತಿನ ಪಟ್ಟಿ ಹಿಡಿದು ಕೇಳಲಿ, ಅದು ಬಿಟ್ಟು ಅಧಿಕಾರದ ಆಸೆಗೆ ಹೀಗಾ ಮಾಡೋದು ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications