ಯಡಿಯೂರಪ್ಪ ಧರಣಿಗೆ ಶಕ್ತಿ ತುಂಬಿದ ಜೆಡಿಎಸ್!
ಬೆಂಗಳೂರು, ನ. 13 : ಶಾದಿಭಾಗ್ಯ ಯೋಜನೆ ವಿಸ್ತರಿಸರಣೆಗೆ ಹಾಗೂ ಎಪಿಎಲ್ ಕಾರ್ಡ್‌ದಾರರಿಗೂ ಪಡಿತರ ವಿತರಣೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದೆ.
ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಯಡಿಯೂರಪ್ಪ ನಡೆಸುತ್ತಿರುವ ಧರಣಿ 13ನೇ ದಿನಕ್ಕೆ ಕಾಲಿಟ್ಟಿದೆ. ನ. 23 ರ ವೆರೆಗೆ ಧರಣಿ ಮುಂದುವರೆಸುವುದಾಗಿ ಈಗಾಗಲೇ ಯಡಿಯೂರಪ್ಪ ಘೋಷಿಸಿದ್ದಾರೆ. ಮಂಗಳವಾರ ಜೆಡಿಎಸ್ ಯಡಿಯೂರಪ್ಪ ಅವರ ಧರಣಿಗೆ ಬೆಂಬಲ ನೀಡಿದ್ದು, ಧರಣಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ವಿಧಾನ ಪರಿಷತ್ ಸದಸ್ಯ ಮತ್ತು ಜೆಡಿಎಸ್‌ನ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಮಂಗಳವಾರ ಯಡಿಯೂರಪ್ಪ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೆ, ಧರಣಿಯಲ್ಲೂ ಕೆಲಕಾಲ ಪಾಲ್ಗೊಂಡು ಬೆಂಬಲ ಸೂಚಿಸಿದರು. ನ.25ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಅಧಿವೇಶನದಲ್ಲಿಯೂ ಜೆಡಿಎಸ್ ಯಡಿಯೂರಪ್ಪ ಅವರ ಚರ್ಚೆಗೆ ಬೆಂಬಲ ನೀಡಿದರೆ, ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ.
ಧರಣಿಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಜನಪರ ಹೋರಾಟ ಯಾರೇ ಮಾಡಿದರೂ ಪಕ್ಷಭೇದ ಮರೆತು ಬೆಂಬಲ ನೀಡಬೇಕಾಗುತ್ತದೆ. ಎಲ್ಲ ಸಮುದಾಯಕ್ಕೂ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಯಡಿಯೂರಪ್ಪ ಧರಣಿ ನಡೆಸುತ್ತಿದ್ದಾರೆ. ಜನರಿಗಾಗಿ ಮಾಡುತ್ತಿರುವ ಅವರ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಟ ಆರಂಭಿಸಿದರೆ, ತಾವು ಅಗತ್ಯ ಬೆಂಬಲ ನೀಡುವುದಾಗಿ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಸದ್ಯ ಜೆಡಿಎಸ್ ಯಡಿಯೂರಪ್ಪ ನಡೆಸುತ್ತಿರುವ ಧರಣಿಗೆ ಬೆಂಬಲ ಸೂಚಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ.(ನ.24ರವರೆಗೆ ಧರಣಿ ವಿಸ್ತರಿಸಿದ ಯಡಿಯೂರಪ್ಪ)
ಇಸ್ಲಾಂ ಕಿಡಿ : ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯದಂತಹ ಕಾಂಗ್ರೆಸ್ ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿರ ರಾಜಕೀಯ ಮಾಡುತ್ತಿವೆ. ಪೌರಾಡಳಿತ ಹಾಗೂ ಅಲ್ಪಸಂಖ್ಯಾತರ ಇಲಾಖೆ ಸಚಿವ ಖಮರುಲ್ ಇಸ್ಲಾಂ ಆರೋಪಿಸಿದ್ದಾರೆ. ಶಾದಿಭಾಗ್ಯ ಅಥವಾ ಬಿದಾಯಿ ಯೋಜನೆಗೆ ಕಳೆದ ಬಜೆಟ್ ಅಧಿವೇಶನ ಸಂದರ್ಭದಲ್ಲೇ ಅನುಮೋದನೆ ಪಡೆಯಲಾಗಿದೆ. ಯೋಜನೆಯ ಹೆಸರಿಗಿಂತ ಉದ್ದೇಶ ಮುಖ್ಯ ಎಂದು ಹೇಳಿದರು. (ಜೆಡಿಎಸ್, ಕೆಜೆಪಿ ದೋಸ್ತಿ ಸುಳಿವು ಕೊಟ್ಟ ಯಡಿಯೂರಪ್ಪ)












Click it and Unblock the Notifications