ಜಯಲಲಿತಾ ಐಷಾರಾಮಿ ವಸ್ತು ಹಸ್ತಾಂತರಿಸಲು ದಿನಾಂಕ ನಿಗದಿಗೊಳಿದ ಬೆಂಗಳೂರು ಕೋರ್ಟ್
ಬೆಂಗಳೂರು, ಜನವರಿ 30: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಐಷಾರಾಮಿ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡಲು ದಿನಾಂಕ ನಿಗದಿಯಾಗಿದೆ. ಜಯಲಲಿತಾ ನಿವಾಸದಿಂದ ತನಿಖಾ ಸಂಸ್ಥೆಗಳು ಜಪ್ತಿ ಮಾಡಿದ್ದ ಚಿನ್ನ, ಬೆಳ್ಳಿ, ಸೀರೆ ಸೇರಿದಂತೆ ಐಷಾರಾಮಿ ವಸ್ತುಗಳು ಕರ್ನಾಟಕದಲ್ಲಿದ್ದವು. ಬೆಂಗಳೂರಿನ ವಿಶೇಷ ಕೋರ್ಟ್ ಈ ವಸ್ತುಗಳನ್ನು ತಮಿಳುನಾಡಿಗೆ ಹಸ್ತಾಂತರ ಮಾಡಲು ದಿನಾಂಕವನ್ನು ನಿಗದಿಗೊಳಿಸಿ ಆದೇಶಿಸಿದೆ.
ಸಿಬಿಐ ಮತ್ತು ಇಡಿ ಪ್ರಕರಣಗಳ ವಿಚಾರಣೆ ನಡೆಸುವ ಬೆಂಗಳೂರು ನಗರದ ವಿಶೇಷ ಕೋರ್ಟ್ ಫೆಬ್ರವರಿ 14 ಮತ್ತು 15ರಂದು ಜೆ. ಜಯಲಲಿತಾ ಐಷಾರಾಮಿ ವಸ್ತುಗಳನ್ನು ತಮಿಳುನಾಡು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕು ಎಂದು ದಿನಾಂಕ ನಿಗದಿ ಮಾಡಿದೆ.

ನ್ಯಾಯಾಧೀಶ ಎಚ್. ಎ. ಮೋಹನ್ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಈ ಜಪ್ತಿ ಮಾಡಿರುವ ಐಷಾರಾಮಿ ವಸ್ತುಗಳ ಮೇಲಿನ ಹಕ್ಕುಗಳನ್ನು ಕೋರಿ ಜಯಲಲಿತಾ ವಾರಸುದಾರರಾದ ಜೆ. ದೀಪಕ್ ಮತ್ತು ಜೆ. ದೀಪಾ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು.
ಆದ್ದರಿಂದ ಐಷಾರಾಮಿ ವಸ್ತುಗಳ ಹಸ್ತಾಂತರಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿತ್ತು. ಆದ್ದರಿಂದ ಈಗ ವಿಶೇಷ ಕೋರ್ಟ್ ಫೆಬ್ರವರಿ 14 ಮತ್ತು 15ರಂದು ವಸ್ತುಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕು ಎಂದು ಸೂಚನೆ ನೀಡಿದೆ.
ಐಷಾರಾಮಿ ವಸ್ತುಗಳು ಯಾವುವು?; ಬೆಂಗಳೂರು ವಿಶೇಷ ನ್ಯಾಯಾಲಯದ ವಶದಲ್ಲಿದ್ದ ಐಷಾರಾಮಿ ವಸ್ತುಗಳನ್ನು ತಮಿಳುನಾಡು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಈ ವಸ್ತುಗಳಲ್ಲಿ 7040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲುಗಳಿವೆ.
ಅಲ್ಲದೇ ಜಯಲಲಿತಾ ನಿವಾಸದಿಂದ ವಶಕ್ಕೆ ಪಡೆದುಕೊಂಡ 12 ರೆಫ್ರಿಜೆರೇಟರ್, 10 ಟಿವಿ ಸೆಟ್ , 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೇಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂ. ನಗದು ಸೇರಿದೆ.
ಜಯಲಲಿತಾ ಅಕ್ರಮ ಆಸ್ತಿಯ ಮೂಲಕ ಈ ವಸ್ತುಗಳನ್ನು ಖರೀದಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರ ನಿವಾಸದ ಮೇಲೆ ತನಿಖಾ ಸಂಸ್ಥೆಗಳು ದಾಳಿ ಮಾಡಿದ ಸಮಯದಲ್ಲಿ ಇವುಗಳನ್ನು ವಶಕ್ಕೆ ಪಡೆಯಲಾಗಿತ್ತು. ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ತಮಿಳುನಾಡಿನಿಂದ ಕರ್ನಾಟಕಕ್ಕೆ ವರ್ಗಾವಣೆಯಾದ ಬಳಿಕ ಈ ವಸ್ತುಗಳನ್ನು ಬೆಂಗಳೂರಿಗೆ ತಂದು ವಿಶೇಷ ಕೋರ್ಟ್‌ಗೆ ಒಪ್ಪಿಸಲಾಗಿತ್ತು.
2024ರ ಮಾರ್ಚ್‌ನಲ್ಲಿಯೇ ಈ ಐಷಾರಾಮಿ ವಸ್ತುಗಳ ಹಸ್ತಾಂತರ ಪ್ರಕ್ರಿಯೆಗೆ ವಿಶೇಷ ಕೋರ್ಟ್ ಅನುಮತಿ ನೀಡಿತ್ತು. ಆಗ ಜಯಲಲಿತಾ ಮಗಳು ಜೆ. ದೀಪ, ಜೆ. ದೀಪಕ್ ಎಂಬುವರು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮವಿ ಸಲ್ಲಿಸಿದ್ದರು. ತಮಿಳುನಾಡು ಸರ್ಕಾರಕ್ಕೆ ಅಲ್ಲ ವಸ್ತುಗಳನ್ನು ತಮಗೆ ಹಸ್ತಾಂತರ ಮಾಡಲು ಸೂಚಿಸಬೇಕು ಎಂದು ಕೋರಿದ್ದರು.
ಆಗ ಹೈಕೋರ್ಟ್ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿತ್ತು. ಕೆಲವು ದಿನಗಳ ಹಿಂದೆ ಜೆ. ದೀಪ, ಜೆ. ದೀಪಕ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ, ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಆದ್ದರಿಂದ ಈಗ ವಿಶೇಷ ಕೋರ್ಟ್ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡಲು ದಿನಾಂಕ ನಿಗದಿ ಮಾಡಿದೆ.












Click it and Unblock the Notifications