ಜಯಾ ಕೇಸ್ ಚೆನ್ನೈಗೆ ವರ್ಗಾಯಿಸಿ ಅಂದ್ರು ದೇವೇಗೌಡ್ರು
ಬೆಂಗಳೂರು, ಅ.4 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪ್ರಕರಣದ ವಿಚಾರಣೆಯನ್ನು ಚೆನ್ನೈಗೆ ವರ್ಗಾವಣೆ ಮಾಡಿ, ಕರ್ನಾಟಕದಲ್ಲಿಯೇ ವಿಚಾರಣೆ ಮುಂದುವರೆದರೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣ ತೀರ್ಪನ್ನು ಕರ್ನಾಟಕದ ವಿಶೇಷ ನ್ಯಾಯಾಲಯ ನೀಡಿದೆ. ಇನ್ನು ಮುಂದೆಯೂ ಅವರನ್ನು ಕರ್ನಾಟಕದಲ್ಲಿ ಇಟ್ಟುಕೊಳ್ಳುವುದು ಸೂಕ್ತವಲ್ಲ ಇದರಿಂದ ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲಿದೆ ಎಂದು ಅಭಿಪ್ರಾಯಪಟ್ಟರು. [ತಮಿಳುನಾಡು ವೆಬ್ ತಾಣದಿಂದ ಜಯಾ ಔಟ್]

ಆಗ ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು ಎಂಬ ಕಾರಣದಿಂದ ಪ್ರಕರಣದ ವಿಚಾರಣೆಯನ್ನು ಕರ್ನಾಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಈಗ ಪ್ರಕರಣದ ತೀರ್ಪು ಹೊರಬಂದು ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಇದು ನಮಗೆ ಸಂಬಂಧಿಸಿದ ವಿಷಯವಲ್ಲ, ಪ್ರಕರಣವನ್ನು ಚೆನ್ನೈಗೆ ವರ್ಗಾವಣೆ ಮಾಡಿ ಎಂದು ದೇವೇಗೌಡರು ಒತ್ತಾಯಿಸಿದರು. ['ಜಯಾ ಸಾಮಾನ್ಯ ಖೈದಿ, ಎಸಿ, ಟಿವಿ ಕೊಟ್ಟಿಲ್ಲ']
ಕರ್ನಾಟಕದಲ್ಲಿ ಸ್ಥಾಪನೆಯಾಗಿದ್ದ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಜಯಲಲಿತಾ ಅವರು ಹೈಕೋರ್ಟ್, ಸುಪ್ರೀಂಕೋರ್ಟ್ ಎಲ್ಲಿ ಬೇಕಾದರೂ ಪ್ರಶ್ನಿಸಿಕೊಳ್ಳಲಿ. ಅವರು ತಮಿಳುನಾಡಿನ ಜೈಲಿನಲ್ಲಿದ್ದುಕೊಂಡೇ ಈ ಕೆಲಸ ಮಾಡಬಹುದು. ಬೆಂಗಳೂರಿನಲ್ಲಿರುವುದರಿಂದ ಇಲ್ಲಿನ ಜನರಿಗೆ ತೊಂದರೆ ಆಗಲಿದೆ ಎಂದು ದೇವೇಗೌಡರು ಹೇಳಿದರು.
ಅ.27ರಂದು ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ.ದಂಡ ವಿಧಿಸಿತ್ತು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಯಲಲಿತಾ ಮತ್ತು ಪ್ರಕರಣದ ಮೂವರು ಅಪರಾಧಿಗಳಿದ್ದಾರೆ. ಈ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಜಯಲಲಿತಾ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಅ.7ರ ಮಂಗಳವಾರ ಅರ್ಜಿಯ ವಿಚಾರಣೆ ನಡೆಯಲಿದೆ.












Click it and Unblock the Notifications