Brand Bengaluru: 'ಜಲಸುರಕ್ಷಾ' ಬೆಂಗಳೂರಿಗಾಗಿ BWSSBಗೆ ಬಂದ ಸಲಹೆಗಳು ಇವು
ಬೆಂಗಳೂರು, ಆಗಸ್ಟ್ 11: ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮೂಲಕ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸೂಕ್ತ ಯೋಜನೆಯನ್ನು ರೂಪಿಸಬೇಕಿದೆ ಎಂದು ಜಲಮಂಡಳಿಯ ಯೋಜನಾ ವಿಭಾಗದ ಮುಖ್ಯ ಅಭಿಯಂತರರು ಹಾಗೂ ಜಲಸುರಕ್ಷಾ ಬೆಂಗಳೂರಿನ ನೋಡಲ್ ಅಧಿಕಾರಿಯಾದ ಕೆ.ಎನ್.ರಾಜೀವ್ ಅವರು ಹೇಳಿದರು.
ಬ್ರ್ಯಾಂಡ್ ಬೆಂಗಳೂರು (Brend Bengaluru) ಯೋಜನೆಯಡಿ "ಜಲಸುರಕ್ಷಾ/ತೃಪ್ತಿಕರ ಬೆಂಗಳೂರು" ವಿಷಯಕ್ಕೆ ಸಂಬಂಧಿಸಿದಂತೆ ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಈವರೆಗೆ ಏಳು ವಿವಿಧ ವಿಷಯಗಳ ಮೇಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (BWSSB) ಬೆಂಗಳೂರು ನಾಗರಿಕರಿಂದ 9,000ಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಇಂದಿನ ಕಾರ್ಯಕ್ರಮದಲ್ಲಿ ಅವೆಲ್ಲ ಸಲಹೆ ಕ್ರೂಢಿಕರಿಸಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಬೆಂಗಳೂರು ನಗರದಾದ್ಯಂತ ಜಲಮಂಡಳಿ ವತಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಅದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಜಲಮಂಡಳಿಯು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಜನರಿಗೆ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ದಿನದ 24 ಗಂಟೆಯೂ ಜಲಮಂಡಳಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಕುಡಿಯುವ ನೀರಿಗಾಗಿ ಬೆಂಗಳೂರಿನ ಜನರು ಹೆಚ್ಚಾಗಿ ಕಾವೇರಿ ನೀರಿನ ಮೆಲೆ ಅವಲಂಭಿತರಾಗಿದ್ದಾರೆ. ಪರ್ಯಾಯ ವ್ಯವಸ್ಥೆಗಳಿಗೆ ನಾವು ಮುಂದಾಗಬೇಕಿದೆ. ಜನಗರಿಗೆ ಗುಣಮಟ್ಟ ನೀರನ್ನು ನೀಡುವ ಸಲುವಾಗಿ ರಿಯಲ್ ಟೈಮ್ ಆನ್‌ಲೈನ್ ನೀರಿನ ಗುಣಮಟ್ಟ ಮಾನಿಟರಿಂಗ್ ಸ್ಟೇಷನ್ ಗಳ ಮೂಲಕ ಮೇಲ್ವಿಚರಾಣೆ ಮಾಡಲಾಗುತ್ತದೆ ಎಂದು ಹೇಳಿದರು.

ಜಲಸುರಕ್ಷಾ ಬೆಂಗಳೂರು: ಬಂದ ಸಲಹೆಗಳು ಯಾವವು?
* ಕೊಳಚೆ ನೀರನ್ನು ರಾಜಕಾಲುವೆ ಹಾಗೂ ಕೆರೆಗಳಿಗೆ ಹರಿಯಲು ಬಿಡದೆ, ಒಳ ಚರಂಡಿಗಳಿಂದಲೇ ಕೊಳಚೆ ನೀರು ಹರಿಯುವಂತೆ ಮಾಡುವ ಜೊತೆಗೆ ಕೊಳಚೆ ನೀರನ್ನು ಸಂಪೂರ್ಣವಾಗಿ ಶುದ್ಧೀಕರಿ ಕೆರೆಗಳಿಗೆ ಬಿಡಬೇಕು.
* ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಇಂಗು ಗುಂಡಿಗಳ ನಿರ್ಮಾಣ ಮಾಡುವುದು.
* ಶುದ್ಧ/ಹೊಸ ನೀರನ್ನು ಉಳಿಸಲು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವಿಧಾನಗಳನ್ನು ಅನುಷ್ಠಾನಕ್ಕೆ ತರುವುದು.
* ಅಂತರ್ಜಲದ ವಿವೇಚನಾರಹಿತ/ಯಥೇಚ್ಛ ಬಳಕೆಯನ್ನು ನಿಯಂತ್ರಿಸುವುದು ಹಾಗೂ ನೀರಿನ ಮಿತ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
* ನೀರು ಪೂರೈಕೆಯ ಮೂಲವಾಗಿ ನಗರದ ಕೆರೆಗಳನ್ನು ಬಳಸುವುದು.
* ಅನಧಿಕೃತವಾಗಿ ಬೋರ್ ವೆಲ್ ಗಳು ಕೊರೆಯುವುದನ್ನು ತಡೆಯುವ ಜೊತೆಗೆ ಅಂತಹವರ ಮೇಲೆ ದುಪ್ಪಟ್ಟು ದಂಡವನ್ನು ವಿಧಿಸುವುದು.
* ಸೋರಿಕೆಯಾಗುವ ನೀರನ್ನು ತಡೆಯಲು ಸೂಕ್ತ ಕ್ರಮವಹಿಸುವುದು.
* ಅಪಾರ್ಟ್‌ಮೆಂಟ್ ಗಳಲ್ಲಿ ಎಸ್.ಟಿ.ಪಿ ಗಳ ನಿರ್ಮಿಸುವುದನ್ನು ಕಡ್ಡಾಯಗೊಳಿಸುವುದು.
* ವಿಕೇಂದ್ರೀಕೃತ ಪದ್ದತಿಯಲ್ಲಿ ಎಸ್.ಟಿ.ಪಿಗಳನ್ನು ನಿರ್ಮಿಸಲು ಕ್ರಮವಹಿಸುವುದು.
* ಕಲುಷಿತ ನೀರು ಶುದ್ಧೀಕರಿಸಿ ಸಂಸ್ಕರಿಸಿದ ನೀರನ್ನು ಮರು ಬಳಕೆ ಮಾಡಲು ನಾಗರಿಕರಲ್ಲಿ ಜಾಗೃತಿ ಮೂಡಿಸುವುದು.
* ಒಳ ಚರಂಡಿಗಳ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವುದು.
ಕಾರ್ಯಕ್ರಮದಲ್ಲಿ ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಾಮರಾಜು, ಬೆಂಗಳೂರು ಜಲಮಂಡಳಿಯ ಮುಖ್ಯ ಅಭಿಯಂತರರಾದ ವೆಂಕಟೇಶ್, ಸುರೇಶ್, ಜಲಮಂಡಳಿ ಅಧಿಕಾರಿಗಳು, ದಯಾನಂದ ಸಾಗರ್ ಕಾಲೇಜು ಪ್ರಾಧ್ಯಾಪಕರು, ಜಲ ತಜ್ಞರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications