ಬೆಂಗಳೂರಲ್ಲಿ ಮತ್ತೊಂದು ಐಟಿ ದಾಳಿ; 40 ಕೋಟಿ ಹಣ ಪತ್ತೆ!
ಬೆಂಗಳೂರು, ಅಕ್ಟೋಬರ್ 15; ಬೆಂಗಳೂರು ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮುಂದುವರೆದಿದೆ. ಶನಿವಾರ ನಡೆಸಿದ ದಾಳಿಯಲ್ಲಿ 40 ಕೋಟಿ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿದೆ. ಈ ಹಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಮಾಜಿ ಸದಸ್ಯರೊಬ್ಬರ ಸಹೋದರನ ವಿಚಾರಣೆ ನಡೆಸಲಾಗಿದೆ.
ಶನಿವಾರ ಬೆಳಗ್ಗೆ 6 ಗಂಟೆಯಿಂದ ಇಡೀ ದಿನ ರಾಜಾಜಿನಗರದ ಕೇತಮಾರನಹಳ್ಳಿಯ ಅಪಾರ್ಟ್‌ಮೆಂಟ್‌ನ ಫ್ಲಾಟ್‌ವೊಂದರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯ ವೇಳೆ 40 ಕೋಟಿ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿದೆ. ಈ ಫ್ಲಾಟ್ ಬಿಲ್ಡರ್ ಸಂತೋಷ್ ಎಂಬುವವರಿಗೆ ಸೇರಿದ್ದು, ಎಂದು ತಿಳಿದುಬಂದಿದೆ.

ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಫ್ಲಾಟ್‌ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ಹಣ ವಿಧಾನ ಪರಿಷತ್‌ನ ಮಾಜಿ ಸದಸ್ಯರೊಬ್ಬರಿಗೆ ಸೇರಿದ್ದು ಎಂಬ ಮಾಹಿತಿ ಸಿಕ್ಕಿದ್ದು, ಅವರ ಸಹೋದರನನ್ನು ಫ್ಲಾಟ್‌ಗೆ ಕರೆಸಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಸತತ 18 ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು 3 ಟ್ರಂಕ್, 3 ಬ್ಯಾಗ್, 1 ಸೂಟ್ ಕೇಸ್‌ಗಳಲ್ಲಿ ಹಣ, ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಬಿಲ್ಡರ್ ಸಂತೋಷ್‌ಗೆ ವಿಚಾರಣೆಗೆ ಆಗಮಿಸಲು ನೋಟಿಸ್ ನೀಡಿದ್ದಾರೆ.
42 ಕೋಟಿ ಹಣ ಪತ್ತೆ; ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ವೇಳೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್. ಅಂಬಿಕಾಪತಿ ನಿವಾಸದಲ್ಲಿ ಬಾಕ್ಸ್‌ಗಳಲ್ಲಿ 42 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಹಣದ ಕುರಿತು ವಿವರಣೆ ನೀಡಲು ಅಕ್ಟೋಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಈ ಹಣ ಪತ್ತೆ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹಣ ಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಗುತ್ತಿಗೆದಾರ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ನಡೆದ ದಾಳಿಯ ವೇಳೆ ವಶಪಡಿಸಿಕೊಂಡಿರುವ 42 ಕೋಟಿ ರೂ. ನಗದು ಮೂಲದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಯಾದ ತಕ್ಷಣ ಒಬ್ಬ ಗುತ್ತಿಗೆದಾರ ಮತ್ತು ಅವರ ಸಂಬಂಧಿಕರ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತ ಇರುವುದು ಪತ್ತೆಯಾಗಿರುವುದು ಇದೇ ಮೊದಲು. ಈ ಸರ್ಕಾರ ಬಿಲ್ ಪಾವತಿಗೆ ಶೇ 10ರಷ್ಟು ಕಮೀಷನ್ ಪಡೆಯುತ್ತಿರುವುದು ಸಾಬೀತಾಗಿದೆ" ಎಂದರು.
ಆರ್. ಅಂಬಿಕಾಪತಿ ನಿವಾಸದಲ್ಲಿ ಸಿಕ್ಕ ಹಣದ ಬಗ್ಗೆ ವಿವರಣೆ ನೀಡಲು ಅವರ ಪುತ್ರ ಪ್ರದೀಪ್‌ಗೆ ನೋಟಿಸ್ ನೀಡಿದ್ದಾರೆ. ಈ ದಾಳಿ ಕುರಿತು ಮಾತನಾಡಿರುವ ಪ್ರದೀಪ್, "15 ವರ್ಷಗಳಿಂದ ರಿಯಲ್ ಎಸ್ಟೇಟ್, ವ್ಯಾಪಾರದಲ್ಲಿ ತೊಡಗಿದ್ದೇವೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡುತ್ತೇವೆ. ಯಾವುದೇ ಹವಾಲಾ ಹಣ ಅಲ್ಲ, ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಕೊಡುತ್ತೇವೆ" ಎಂದು ಹೇಳಿದ್ದಾರೆ.












Click it and Unblock the Notifications