IT Raid: ಮೈಸೂರು, ಬೆಂಗಳೂರಿನಲ್ಲಿ 20 ಕೋಟಿ ರುಪಾಯಿ ನಗದು, 5 ಕೋಟಿ ಮೌಲ್ಯದ ಚಿನ್ನ ವಶಕ್ಕೆ
ಚುನಾವಣೆ ಸಮೀಪವಿರುವ ಬೆನ್ನಲ್ಲೇ ಬೆಂಗಳೂರು ಮತ್ತು ಮೈಸೂರಿನ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಭರ್ಜರಿ ಭೇಟೆ ನಡೆಸಿದ್ದು, 20 ಕೋಟಿ ರುಪಾಯಿ ನಗದು, 5 ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಮತ್ತು ಮೈಸೂರು ನಗರದ ಹಲವು ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳಿಗೆ, ಕಂತೆ ಕಂತೆ ಹಣ ಸಿಕ್ಕಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಿಗೆ ಹಣ ಹಂಚುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬಂದ ದೂರುಗಳನ್ನು ಆಧರಿಸಿ ಈ ದಾಳಿ ಮಾಡಲಾಗಿದೆ ಎನ್ನಲಾಗಿದೆ.

ಬೆಂಗಳೂರಿನ ಶಾಂತಿನಗರ, ಶಿವಾಜಿನಗರ, ಆರ್ಎಂವಿ ಬಡಾವಣೆ, ಕಾಕ್ಸ್ಟೌನ್, ಸದಾಶಿವ ನಗರ, ಕುಮಾರಪಾರ್ಕ್ ವೆಸ್ಟ್ ಸೇರಿ ಹಲವು ಕಡೆ ದಾಳಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರಿಗೆ ಹಣ ಹಂಚಿಕೆ ಮಾಡುವ ಆರೋಪಗಳು ಕೇಳಿಬರುತ್ತವೆ.
ಬೆಂಗಳೂರು ಮತ್ತು ಮೈಸೂರಿನ ಹಲವು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ದಾಳಿ ವೇಳೆ ಸುಮಾರು 20 ಕೋಟಿ ಹಣ ಪತ್ತೆಯಾಗಿದೆ.#ITRaid #bengaluru #Mysuru #KarnatakaElections2023 pic.twitter.com/YtbcbUrFdB
— oneindiakannada (@OneindiaKannada) May 6, 2023
ಚುನಾವಣಾ ಅಕ್ರಮವನ್ನು ತಡೆಯಲು ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲಾ ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಜನನಾಯಕರ ಚಲನವಲಗಳನ್ನು ಗಮನಿಸುತ್ತಿದ್ದಾರೆ. ಈ ಮಧ್ಯೆ ಆದಾಯ ತೆರಿಗೆ ಇಲಾಖೆ ಕೂಡ ಮಿಂಚಿನ ಕಾರ್ಯಾಚರಣೆ ನಡೆಸುತ್ತಿದೆ.
ಇತ್ತೀಚೆಗೆ ತಾನೆ ಮೈಸೂರು, ಹಾಸನದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಮೈಸೂರಿನಲ್ಲಿ ಮನೆಯ ಮುಂದೆ ಇದ್ದ ಮರದಲ್ಲಿ ಮಾವಿನ ಹಣ್ಣಿನ ಬಾಕ್ಸ್‌ನಲ್ಲಿ ಕೋಟಿಗಟ್ಟಲೆ ಹಣ ಬಚ್ಚಿಟ್ಟಿದ್ದನ್ನು ಪತ್ತೆ ಮಾಡಿದ್ದರು. ಅಲ್ಲದೆ ಬೆಂಗಳೂರಿನ ಚಿಕ್ಕಪಟೇ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಮನೆ ಮೇಲ ಕೂಡ ಅಧಿಕಾರಿಗಳು ದಾಳಿ ನಡೆಸಿ, ಸೀರೆ, ಸೂಟ್, ಮತದಾರರ ಗುರುತಿನ ಚೀಟಿ ಜೊತೆ ಇದ್ದ ಚೆಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.












Click it and Unblock the Notifications