ಮೋದಿಗೆ ಅಳುಕಿದೆ, ಅದಿಕ್ಕೇ ವಾರಣಾಸಿ ತುಂಬಾ ರೋಡ್ ಶೋ ಮಾಡ್ತಿದ್ದಾರೆ - ದೇವೇಗೌಡ
ಬೆಂಗಳೂರು, ಮಾರ್ಚ್ 8: 'ಉತ್ತರ ಪ್ರದೇಶದಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಬಿಜೆಪಿಯ ನಾಗಾಲೋಟವನ್ನು ತಡೆಯುವ ಶಕ್ತಿ ಪ್ರಾದೇಶಿಕ ಪಕ್ಷಗಳಿಗೆ ಇಲ್ಲ' ಎಂದು ಮಾಜಿ ಪ್ರಧಾನಿ ದೇವೇಗೌಡರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಾಧ್ಯಮ ಸಂವಾದ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.[ಮೋದಿಜೀ, ಫಾರ್ಮರ್ಸ್ ಇಂಡಿಯಾ ಯೋಜನೆ ತನ್ನಿ: ದೇವೇಗೌಡ]
ಈಗಾಗಲೇ ಸಂಸತ್ತಿನಲ್ಲಿ ವಿರೋಧ ಪಕ್ಷವಿಲ್ಲ. ಹೆಚ್ಚಿನ ಸ್ಥಾನ ಹೊಂದಿರುವ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿರೋಧ ಪಕ್ಷದ ಮುಖಂಡನ ಗೌರವ ನೀಡಲಾಗಿದೆ ಅಷ್ಟೆ. ಕೆಲವು ಸಂಸ್ಥೆಗಳಿಗೆ ಅಧಿಕಾರಿಗಳನ್ನು, ಮುಖ್ಯಸ್ಥರನ್ನು ನೇಮಕ ಮಾಡುವ ಉನ್ನತ ಮಟ್ಟದ ಸಭೆಯಲ್ಲಿ ಖರ್ಗೆಯವರಿಗೂ ಪಾಲ್ಗೊಳ್ಳಲು ಕರೆಯುತ್ತಾರಷ್ಟೆ. ಇದರಿಂದ ಮುಂದೇನು ಎಂಬ ಆತಂಕ ತಲೆದೋರಿದೆ ಎಂದು ದೇವೇಗೌಡರು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ತಡೆಯುವ ಶಕ್ತಿ ಇಲ್ಲ
"ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಕಳೆದೊಂದು ವರ್ಷದಿಂದ ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಬಿಜೆಪಿಯಲ್ಲಿ ಅಪೂರ್ವ ಸೋದರರಂತೆ ಇರುವ ಅಮಿತ್ ಶಾ ಮತ್ತು ನರೇಂದ್ರ ಮೋದಿ ಇದಕ್ಕೆ ಬೇಕಾದ ಎಲ್ಲವನ್ನೂ ಮಾಡುತ್ತಿದ್ದಾರೆ. ಒಂದೊಮ್ಮೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದ್ರೆ, ಅದನ್ನು ತಡೆಯುವ ಶಕ್ತಿ ಪ್ರಾದೇಶಿಕ ಪಕ್ಷಗಳಿಗೆ ಇಲ್ಲ," ಎಂದು ದೇವೇಗೌಡರು ಅಭಿಪ್ರಾಯ ಪಟ್ಟರು.
ಬಿಜೆಪಿಯಲ್ಲಿ ಬುದ್ಧಿವಂತರಿದ್ದಾರೆ. ಅದರಲ್ಲೂ ಇಲ್ಲದ ಸಂಘರ್ಷ ಸೃಷ್ಟಿ ಮಾಡುವುದರಲ್ಲಿ ಅವರು ನಿಪುಣರು ಎಂದು ದೇವೇಗೌಡ ವ್ಯಂಗ್ಯವಾಡಿದರು.

ಪ್ರಧಾನಿ ಮೇಲೆ ಆಕ್ರೋಶ
ಪೂರ್ವ ಸಿದ್ಧತೆ ಇಲ್ಲದೆ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ್ದು ಯಾಕೆ ಎಂದು ದೇವೇಗೌಡರು ಪ್ರಧಾನಿ ವಿರುದ್ಧ ಹರಿಹಾಯ್ದರು. ದೇಶದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ ಎಂದು ನನಗೂ ಗೊತ್ತು. ಆದರೆ ಪೂರ್ವ ಸಿದ್ಧತೆ ಮಾಡದೆ ನೋಟ್ ಬ್ಯಾನ್ ಜಾರಿ ಮಾಡಿದ್ದು ಸರಿಯಲ್ಲ. ಇದರಿಂದ ಯಾವ ಯಾವ ಹಂತಗಳಲ್ಲಿ ಕಾರ್ಮಿಕರು ಕಾಂಟ್ರಾಕ್ಟರುಗಳಿಗೆಲ್ಲಾ ತೊಂದರೆಯಾಗುತ್ತದೆ ಎಂದು ವಿವರವಾಗಿ ಪತ್ರ ಬರೆದೆ. ಆದರೆ ಏನೂ ಆಗಲೇ ಇಲ್ಲ. ಪ್ರಧಾನಿಗಳ ಬಗ್ಗೆ ನನಗೂ ಗೌರವ ಇದೆ. 5 ಬಾರಿ ಅವರನ್ನು ಭೇಟಿಯಾದಾಗಲೂ ನನ್ನ ಜತೆ ಗೌರವದಿಂದ ವರ್ತಿಸಿದ್ದಾರೆ. ಅವರ ಬಗ್ಗೆ ಲಘುವಾಗಿ ಮಾತನಾಡಲಾರೆ. ಆದರೆ ನಿಮ್ಮ ಬಗ್ಗೆ ಲಘುವಾಗಿ ಮಾತನಾಡಲು ಅವಕಾಶ ಕೊಡಬೇಡಿ ಎಂದು ಅವರನ್ನು ಕೇಳಿಕೊಂಡಿದ್ದೆ," ಎಂದು ದೇವೇಗೌಡರು ಹೇಳಿದರು.[ಸಿದ್ದು ಮನೆ ಮುಂದೆ ದೇವೇಗೌಡ ಆಮರಣಾಂತ ಉಪವಾಸ]

ಹಣ ಎಲ್ಲಿಂದ ಬರುತ್ತದೆ?
ನೋಟ್ ಬ್ಯಾನ್ ಆದ ನಂತರ ಲಕ್ನೋದಲ್ಲಿ ಮೊದಲ ರ್ಯಾಲಿ ಮಾಡಲಾಯಿತು. ಇದಕ್ಕೆ 5 ಲಕ್ಷ ಜನ ಬಂದಿದ್ದರು. ಇದಕ್ಕೆ ಎಷ್ಟು ಬಸ್ಸಿನಲ್ಲಿ ಜನರನ್ನು ಕರೆತರಲಾಯಿತು? ಇದಕ್ಕೆಲ್ಲಾ ದುಡ್ಡು ಎಲ್ಲಿಂದ ಬಂತು? ಎಂದು ಅವರು ಪ್ರಶ್ನಿಸಿದರು. ಇದನ್ನೆಲ್ಲಾ ಪ್ರಶ್ನಿಸಲು ಪ್ರಾದೇಶಿಕ ಪಕ್ಷಗಳಿಗೆ ಶಕ್ತಿ ಇಲ್ಲ. ಮಮತಾ ಬ್ಯಾನರ್ಜಿ ಮಾತ್ರ ನೋಟ್ ಬ್ಯಾನ್ ವಿಚಾರವನ್ನು ನಿರ್ಭಯವಾಗಿ ಖಂಡಿಸಿದರು ಎಂದು ದೇವೇಗೌಡರು ಹೇಳಿದರು.

ನರೇಂದ್ರ ಮೋದಿ ಹಿಂದೆ 5 ಕಾರ್ಪೊರೇಟ್ ಶಕ್ತಿಗಳು
ಗುಜರಾತ್ ಮೂಲದ 5 ಕಾರ್ಪೊರೇಟ್ ಶಕ್ತಿಗಳು ನರೇಂದ್ರ ಮೋದಿಯನ್ನು ಅಧಿಕಾರಕ್ಕೆ ತಂದರು. ಮೋದಿ ಹೆಸರನ್ನು ಅವರೆಲ್ಲಾ ಚಾಲನೆಗೆ ತಂದ ನಂತರ ಅದು ಆರ್.ಎಸ್.ಎಸ್ ಅಂಗಳಕ್ಕೆ ಮುಟ್ಟಿತು. ಕೊನೆಗೆ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆದೇಶಕ್ಕೆ ಎಲ್ಲರೂ ತಲೆ ಬಾಗಬೇಕಾಯಿತು ಎಂದು ದೇವೇಗೌಡರು ತಿಳಿಸಿದರು. ಆ ಬಳಿಕ ಮೋದಿ ಬಿಹಾರದಲ್ಲಿ ಮೊದಲ ಸಾರ್ವಜನಿಕ ಸಭೆ ನಡೆಸಿದರು ಎಂದು ದೇವೇಗೌಡರು ಮಾಹಿತಿ ನೀಡಿದರು.[ಬಿಜೆಪಿ, ಕಾಂಗ್ರೆಸ್ ನಿಂದ ರಾಜ್ಯ ಹಾಳಾಗಿದೆ ಎಂದ ದೇವೇಗೌಡರು]

13 ಪಕ್ಷಗಳ ಅಸಹಕಾರ, ಮೋದಿ ಅಧಿಕಾರಕ್ಕೆ
13 ಪಕ್ಷಗಳು ಸೇರಿ ದೇಶದಲ್ಲಿ ಪರ್ಯಾಯ ಶಕ್ತಿ ಕಟ್ಟಲು ಹೊರಟಿದ್ದೆವು. ನಾನು ಪ್ರಧಾನಿಯಾಗುವುದಿಲ್ಲ ನೀವು ಯಾರಾದರು ಪ್ರಧಾನಿಯಾಗಿ ಎಂದು ನಾನು ಉಳಿದ ಪಕ್ಷಗಳಿಗೆ ಖಂಡತುಂಡವಾಗಿ ಹೇಳಿದ್ದೆ. ಆದರೆ ಅವರ ಅಸಹಕಾರದಿಂದ ಈ ಒಕ್ಕೂಟ ಉಳಿಯಲಿಲ್ಲ. ಇದರಿಂದ ನರೇಂದ್ರ ಮೋದಿ ನಿರಾಯಾಸವಾಗಿ ಪ್ರಧಾನಿಯಾದರು.
ಕಾಂಗ್ರೆಸ್ ಕೂಡಾ ಇದಕ್ಕೆ ಹಾದಿ ಸುಗಮ ಮಾಡಿತು. 10 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಕೆಲವು ಹಗರಣಗಳಲ್ಲಿ ಕಾಣಿಸಿಕೊಂಡಿದ್ದು, ಅದು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಚರ್ಚೆಗೆ ಬಂತು. ಇದೇ ಅದಕ್ಕೆ ಮುಳುವಾಯಿತು. 40 ವರ್ಷ ಆಡಳಿತದಲ್ಲಿದ್ದ ಪಕ್ಷ ಇಂದು ಇಳಿಮುಖವಾಗಿದೆ ಎಂದು ದೇವೇಗೌಡರು ತಿಳಿಸಿದರು.

ಮೋದಿ ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ
ಅಟಲ್ ಬಿಹಾರಿ ವಾಜಪೇಯಿ ತುಂಬಾ ಎತ್ತರದ ವ್ಯಕ್ತಿ. ಅವರು ಯಾವತ್ತೂ ಒಂದೇ ರೀತಿಯಲ್ಲಿ ಮಾತನಾಡುತ್ತಿದ್ದರು. ವಾಜಪೇಯಿ ಮಾತನ್ನು ಕುತೂಹಲದಿಂದ ಕೇಳುತ್ತಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಒಬ್ಬ ವಾಕ್ಚತುರ. ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ. ಭ್ರಷ್ಟಾಚಾರ ಮುಕ್ತ, ಕಾಂಗ್ರೆಸ್ ಮುಕ್ತ, ಸ್ಟಾರ್ಟ್ ಅಪ್ ಹೀಗೆ ಹಲವಾರು ಘೋಷಣೆಗಳನ್ನು ಅವರು ಮಾಡಿದ್ದಾರೆ. ಅದನ್ನು ಅನುಷ್ಠಾನಕ್ಕೆ ಮಾತ್ರ ತಂದಿಲ್ಲ ಇದೇ ಸಮಸ್ಯೆ ಎಂದು ದೇವೇಗೌಡರು ಹರಿಹಾಯ್ದರು.[ಸಭ್ಯತೆಯ ಎಲ್ಲೆ ಮೀರಲಾರೆ: ಹೆಚ್.ಡಿ.ದೇವೇಗೌಡ ಸ್ಪಷ್ಟನೆ]

ರೋಡ್ ಶೋ ಅಗತ್ಯವೇ ಇರಲಿಲ್ಲ
ಒಂದೊಮ್ಮೆ ಪ್ರಧಾನಿಗಳು ತಾವು ಹೇಳಿದ್ದೆಲ್ಲವನ್ನೂ ಜಾರಿಗೆ ತಂದಿದ್ದರೆ ಇವತ್ತು ವಾರಣಾಸಿಯಲ್ಲಿ ಬೆನ್ನು ಬೆನ್ನು ರೋಡ್ ಶೋ ನಡೆಸುವ ಅಗತ್ಯವೇ ಇರಲಿಲ್ಲ. ಮೋದಿ ಗೆ ಅಳುಕಿದೇ ಈ ಹಿನ್ನಲೆಯಲ್ಲಿ ಮೋದಿ ವಾರಣಾಸಿ ತುಂಬಾ ರೋಡ್ ಶೋ ನಡೆಸಿದ್ದಾರೆ. ಇವತ್ತು ಅವರ ರ್ಯಾಲಿಗೆ ಜನ ಸೇರಬಹುದು. ಆದರೆ ರಾಜಕೀಯದಲ್ಲಿದ್ದ ನನಗೆ ಗೊತ್ತಿದೆ. ಪಕ್ಕದ ಸ್ಥಳಗಳಿಂದಲೂ ಜನ ಕರೆದುಕೊಂಡು ಬಂದು ಜೈಕಾರ ಹಾಕಿಸುವುದು ದೊಡ್ಡ ಕೆಲಸವೇನಲ್ಲ ಎಂದು ಅವರು ಹೇಳಿದರು.

ಕಾರ್ಯವೈಖರಿಗೆ ಅಸಮಧಾನ
1952ರಿಂದ ನಾನು ರಾಜಕೀಯದಲ್ಲಿ ಎಲ್ಲವನ್ನೂ ನೋಡುತ್ತಾ ಬಂದಿದ್ದೇನೆ. ಆಗಿದ್ದ ಪರಿಸ್ಥಿತಿ ಈಗಿಲ್ಲ. ಶಾಸಕಾಂಗ, ಕಾರ್ಯಾಂಗವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಕಾರ್ಯವೈಖರಿಯೂ ಇಳಿಮುಖವಾಗಿದೆ. ರಾಜಕೀಯ ಈ ಮಟ್ಟಕ್ಕೆ ಇಳಿಯುತ್ತಿರುವುದರ ಮೋವು ವೇದನೆಯನ್ನು ನಾನು ಅನುಭವಿಸುತ್ತಿದ್ದೇನೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಸಿದ್ಧರಾಮಯ್ಯ 'ನನ್ನ ಹಳೆಯ ಒಳ್ಳೆ ಗೆಳೆಯ'
ಸಿದ್ದರಾಮಯ್ಯನವರ 4 ವರ್ಷದ ಸರಕಾರಕ್ಕೆ ಎಷ್ಟು ಮಾರ್ಕ್ ನೀಡ್ತೀರಿ ಎಂಬ ಪ್ರಶ್ನೆ ದೇವೇಗೌಡರಿಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಮಾಜಿ ಪ್ರಧಾನಿಗಳು, 'ಹಿ ಈಸ್ ಮೈ ಗುಡ್ ಓಲ್ಡ್ ಫ್ರೆಂಡ್'. ಅವರ ಬಗ್ಗೆ ನಾನು ಏನೂ ಹೇಳಲ್ಲ ಎಂದು ಹೇಳಿದರು.

ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕಾರ
ಇದೇ ಸಂದರ್ಭದಲ್ಲಿ ದೇವೇಗೌಡರಿಗೆ 2016ನೇ ಸಾಲಿನ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾವೇರಿ ಸಮಸ್ಯೆಯ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಉಪವಾಸ ಕೂತು, ನ್ಯಾಯಾಂಗ ಮತ್ತು ಕೇಂದ್ರದ ಗಮನವನ್ನು ಸೆಳೆದು ದೇವೇಗೌಡರು ಕರ್ನಾಟಕದ ಪರವಾಗಿ ತೀರ್ಪು ಬರುವಂತೆ ಮಾಡಿದರು ಎಂದು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ದೇವೇಗೌಡರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.












Click it and Unblock the Notifications