ನ್ಯೂಯಾರ್ಕ್, ಸ್ಯಾನ್‌ಫ್ರಾನ್ಸಿಸ್ಕೋಗೆ ಟಕ್ಕರ್ ಕೊಟ್ಟ ನಮ್ಮ ಬೆಂಗಳೂರು
ಈಗಾಗಲೇ ಟೆಕ್ ಸಿಟಿ, ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಟ್ರಾಫಿಕ್ ಸಿಟಿ ಹೀಗೆ ಹಲವು ಖ್ಯಾತಿ ಗಳಿಸಿರುವ ನಮ್ಮ ಬೆಂಗಳೂರು ಇದೀಗ ಮತ್ತೊಂದು ವಿಚಾರದಲ್ಲಿ ಜಾಗತಿಕವಾಗಿ ಗಮನ ಸೆಳೆದಿದೆ. ಸಿಬಿಆರ್‌ಇ ವರದಿಯ ಪ್ರಕಾರ ಬೆಂಗಳೂರು ವಿಶ್ವದ ಅಗ್ರ 12 ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಟೆಕ್ ಉದ್ಯೋಗಿಗಳ ಸಂಖ್ಯೆ 1 ಮಿಲಿಯನ್ ಗಡಿ ದಾಟಿದೆ. ಭಾರತದ ಐಟಿ ರಾಜಧಾನಿಯಾಗಿರುವ ಬೆಂಗಳೂರು ಇದೀಗ ದೇಶದ ಪ್ರಮುಖ ಕೃತಕ ಬುದ್ಧಿಮತ್ತೆ (AI) ಪ್ರತಿಭೆಗಳ ಕೇಂದ್ರವಾಗಿಯೂ ಹೊರಹೊಮ್ಮಿದೆ. ಅಲ್ಲದೆ ದೇಶದಲ್ಲಿ ಅತಿ ಹೆಚ್ಚು ಎಐ-ಸಂಬಂಧಿತ ವೃತ್ತಿಪರರನ್ನು ಹೊಂದಿದೆ ಎಂದು ಸಿಬಿಆರ್‌ಇಯ ಇತ್ತೀಚಿನ ಗ್ಲೋಬಲ್ ಟೆಕ್ ಟ್ಯಾಲೆಂಟ್ ಗೈಡ್‌ಬುಕ್ 2025 ವರಿದಿಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿರುವ ಟೆಕ್ ಪ್ರತಿಭೆಗಳು ಈಗ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನ್ಯೂಯಾರ್ಕ್‌ನಂತಹ ಜಾಗತಿಕ ತಂತ್ರಜ್ಞಾನ ನಗರಗಳಿಗೆ ಸಮಾನವಾಗಿದ್ದಾರೆ ಎಂದು ವರದಿ ಹೇಳಿದೆ. ಲಂಡನ್, ಟೋಕಿಯೊ, ಶಾಂಘೈ ಮತ್ತು ಟೊರೊಂಟೊದಂತಹ ನಗರಗಳ ಜೊತೆಗೆ ನಮ್ಮ ಬೆಂಗಳೂರು ಕೂಡ ಟಾಪ್ 12 ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಬರೋಬ್ಬರಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳನ್ನು ಹೊಂದಿರುವ ಬೆಂಗಳೂರು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಅತಿದೊಡ್ಡ ಟೆಕ್ ಪ್ರತಿಭೆಗಳ ತಾಣವಾಗಿದೆ.

ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮುತ್ತಿರುವುದು ಡಿಜಿಟಲ್ ನಾವೀನ್ಯತೆ, ಕೃತಕ ಬುದ್ಧಿಮತ್ತೆ ಮತ್ತು ಪ್ರತಿಭೆಗಳನ್ನು ಸಜ್ಜುಗೊಳಿಸುವುದು ಭಾರತದ ಕಾರ್ಯತಂತ್ರದ ಆಳವನ್ನು ಪ್ರತಿಬಿಂಬಿಸುತ್ತದೆ. ಇದು ಮೌಲ್ಯವನ್ನು ಸೃಷ್ಟಿಸುವುದಲ್ಲದೆ, ಉದಯೋನ್ಮುಖ ಕಾರಿಡಾರ್‌ಗಳಲ್ಲಿ ತನ್ನ ಸಾಮರ್ಥ್ಯವನ್ನು ತೆರೆದುಕೊಳ್ಳುತ್ತಿರುವ ಮಾರುಕಟ್ಟೆಯಾಗಿದೆ ಎಂದು ಸಿಬಿಆರ್‌ಇಯ ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಮ್ಯಾಗಜೀನ್ ತಿಳಿಸಿದ್ದಾರೆ.
ಬೆಂಗಳೂರಿನ ಎಐ ಪರಿಸರ ವ್ಯವಸ್ಥೆಯು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಉನ್ನತ ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು 28 ಯುನಿಕಾರ್ನ್‌ಗಳ ಬಲವಾದ ನೆಲೆಯಾಗಿದೆ. 2018 ಮತ್ತು 2023ರ ನಡುವೆ, ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಟೆಕ್ ಸಂಬಂಧಿತ ತಾಂತ್ರಿಕ ಉದ್ಯೋಗವು ಶೇಕಡಾ 12ರಷ್ಟು ಹೆಚ್ಚಾಗಿದೆ. 2024ರಲ್ಲಿ ಇದು ಎಐ ವಿಭಾಗದಲ್ಲಿ 34 ಒಪ್ಪಂದಗಳು ಒಳಗೊಂಡಂತೆ 3.3 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಗಳನ್ನು ಆಕರ್ಷಿಸಿದೆ ಎಂದು ವರದಿ ಹೇಳಿದೆ.
ಉದ್ಯೋಗ ಮಾಡುವ ಜನಸಂಖ್ಯೆಯ ವಿಷಯದಲ್ಲಿ ಬೆಂಗಳೂರು ಜಾಗತಿಕವಾಗಿ 12 ಟೆಕ್ ಹಬ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅದರ ಜನಸಂಖ್ಯೆಯ ಶೇ 75.5ರಷ್ಟು ಉದ್ಯೋಗಿಗಳನ್ನು ಬೆಂಗಳೂರು ಹೊಂದಿದ್ದು, ಕೆಲಸ ಮಾಡುವ ಜನಸಂಖ್ಯೆಯು 2019 ಮತ್ತು 2024ರ ನಡುವೆ ಶೇಕಡಾ 2.4ರಷ್ಟು ಬೆಳೆದಿದ್ದು, ಇದು ಜಾಗತಿಕವಾಗಿ ಅತ್ಯಂತ ವೇಗವಾದ ಬೆಳವಣಿಗೆ ಎಂದು ಹೇಳಲಾಗಿದೆ.
ಬೆಂಗಳೂರು ಜಾಗತಿಕ 12 ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾಗಿದ್ದು, ಬೀಜಿಂಗ್, ಬೋಸ್ಟನ್, ಲಂಡನ್, ನ್ಯೂಯಾರ್ಕ್ ಮೆಟ್ರೋ, ಪ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ, ಸಿಯಾಟಲ್, ಶಾಂಘೈ, ಸಿಂಗಾಪುರ್, ಟೋಕಿಯೊ ಮತ್ತು ಟೊರೊಂಟೊ ಇತರ ತಂತ್ರಜ್ಞಾನ ಶಕ್ತಿ ಕೇಂದ್ರಗಳಾಗಿವೆ.












Click it and Unblock the Notifications