ನಮ್ಮ ಮೆಟ್ರೋದಲ್ಲಿ ಐಟಿ ಮತ್ತು ಬಿಟಿ ಸಚಿವರ ಪ್ರಯಾಣ: ಪ್ರಯಾಣಿಕರೊಂದಿಗೆ ಪ್ರಿಯಾಂಕ್ ಖರ್ಗೆ ಸಂವಾದ
ಬೆಂಗಳೂರು ಸೆಪ್ಟೆಂಬರ್ 4: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಂದು ಐಟಿ ಮತ್ತು ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪ್ರಯಾಣ ಮಾಡುವ ಮೂಲಕ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ನಾಸ್ಕಾಮ್ ಮತ್ತು ಇಂಜಿನಿಯರಿಂಗ್ ಶೃಂಗಸಭೆ 2024ರಲ್ಲಿ ಭಾಗವಹಿಸಲು ಸಚಿವರು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಿದರು.
40 ನಿಮಿಷಗಳ ಮೆಟ್ರೋ ಪ್ರಯಾಣದಲ್ಲಿ ಅವರು ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸಿ ನಗರದಲ್ಲಿ ಪ್ರಯಾಣಿಕರ ದೈನಂದಿನ ಸಾರ್ವಜನಿಕ ಸಾರಿಗೆ ಅನುಭವಗಳ ಬಗ್ಗೆ ಮಾಹಿತಿ ಪಡೆದರು. ವಿಧಾನಸೌಧ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಆಗಮಿಸುವವರೆಗೂ ಅವರು ತಮ್ಮ ಫೋನ್ ಕಾಲ್‌ಗಳನ್ನು ಸ್ವೀಕರಿಸಿ ಮಾತನಾಡಿದರು.

ಪಿಂಕ್ ಲೈನ್ ಮೆಟ್ರೋ:
ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಗುಲಾಬಿ ಮಾರ್ಗದಲ್ಲಿ ಸುರಂಗ ಮಾರ್ಗದ ಶೇ.96 ರಷ್ಟು ಕೆಲಸ ಮುಕ್ತಾಯವಾಗಿದ್ದು, ಈ ವರ್ಷ ನವೆಂಬರ್ ಅಂತ್ಯಕ್ಕೆ ಸಂಪೂರ್ಣ ಸುರಂಗ ಕೊರೆಯುವ ಕೆಲಸ ಮುಕ್ತಾಯವಾಗಲಿದೆ. ಈ ಮಾರ್ಗದಲ್ಲಿ 936.6 ಮೀ ಸುರಂಗ ಕೊರೆಯುವ ಕಾಮಗಾರಿಯು ಬುಧವಾರ ಪೂರ್ಣಗೊಳಿಸಿ ಟನಲ್ ಬೋರಿಂಗ್ ಮಷಿನ್ ಹೊರ ಬಂದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಮಾಹಿತಿ ನೀಡಿದೆ.
ಡೇರಿ ಸರ್ಕಲ್‌ನಿಂದ ನಾಗವಾರವರೆಗೆ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 21,249 ಮೀಟರ್ ಪೈಕಿ 20,557 ಮೀಟರ್ ಉದ್ದದ ಮಾರ್ಗ ಅಂದರೆ ಶೇ.96.7ರಷ್ಟು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಂತಾಗಿದೆ. ಒಟ್ಟಾರೆ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ 7 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿವೆ.

ಈ ಸುರಂಗ ಕೊರೆಯುವ ಯಂತ್ರ ತುಂಗಾ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ 2024ರ ಫೆಬ್ರವರಿ 3ರಂದು ಟನಲ್ ಕೊರೆಯಲು ಆರಂಭಿಸಿತ್ತು. ಅಂದು ಪ್ರಾರಂಭವಾಗಿದ್ದ ಸುರಂಗ ಕಾಮಗಾರಿಯು ಇಂದು 936.6 ಮೀ ಕೊರೆಯುವ ಮೂಲಕ ಅಂತ್ಯವಾಗಿದೆ.
ಈ ತುಂಗಾ ಟಿಬಿಎಂ ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್‌ನಲ್ಲಿ ಪೂರ್ಣಗೊಳಿಸಿ ಹೊರ ಬಂದಿದೆ ಎಂದು ಬಿಎಂಆರ್‌ಸಿಎಲ್ ಹರ್ಷ ವ್ಯಕ್ತಪಡಿಸಿದೆ. ಇದೇ ಮಾರ್ಗದಲ್ಲಿ ಬಾಕಿ ಇರುವ ಇನ್ನೊಂದು ಟಿಬಿಎಂ ತನ್ನ ಕೆಲಸ ಪೂರ್ಣಗೊಳಿಸಿದರೆ ಒಟ್ಟು ಶೇಕಡಾ 100ರಷ್ಟು ಕೆಲಸ ಪೂರ್ಣಗೊಂಡಂತಾಗಲಿದೆ. ಈ ಕೆಲಸ ಮುಮದಿನ ನವೆಂಬರ್‌ಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಸುರಂಗ ಕೊರೆಯುವ ಕೆಲಸ ಪೂರ್ಣವಾದ ಕಡೆ ಟ್ರ್ಯಾಕ್ ಅಳವಡಿಕೆಗೆ ಅಗತ್ಯವಿರುವ ಕೆಲಸ ಸೇರಿದಂತೆ ಉಳಿದ ಸಿವಿಲ್ ಕಾಮಗಾರಿ ನಡೆಯುತ್ತಿದೆ. 2025 ರ ಅಂತ್ಯಕ್ಕೆ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.












Click it and Unblock the Notifications