ಕೆಪಿಎಸ್‌ಸಿ 660 ಎಇ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಆರೋಪ: ನ್ಯಾಯಾಂಗ ತನಿಖೆಗೆ ಎಎಪಿ ಆಗ್ರಹ
ಬೆಂಗಳೂರು, ಜನವರಿ 18: ಲೋಕೋಪಯೋಗಿ ಇಲಾಖೆಯ 660 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿ ಸಂದರ್ಶನದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಎಸಗಿದ ಅಕ್ರಮದ ವಿರುದ್ಧ ನ್ಯಾಯಾಂಗ ತನಿಖೆಗೆ ಆಮ್ ಆದ್ಮಿ ಪಾರ್ಟಿ ರಾಜ್ಯ ಯುವ ಘಟಕ ಆಗ್ರಹಿಸಿದೆ.
ಬುಧವಾರ ಬೆಂಗಳೂರಿನಲ್ಲಿ ಕೆಪಿಎಸ್‌ಸಿ ಕಚೇರಿ ಮುಂದೆ ಏಕಾಂಗಿಯಾಗಿ ಆಮ್ ಆದ್ಮಿ ಪಾರ್ಟಿ (AAP) ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ ಗೌಡ ಅವರು ಪ್ರತಿಭಟನೆ ನಡೆಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು,
ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರವು ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಪ್ರಾಮಾಣಿಕ ಯುವಕರಿಗೆ ಅನ್ಯಾಯವಾಗುತ್ತಿದೆ. ಲೋಕೋಪಯೋಗಿ ಇಲಾಖೆಯ 660 ಎಇ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ ಸಂದರ್ಶನದ ಅಂಕ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆಪಾದಿಸಿದರು.

ಒಟ್ಟು 400 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕೇವಲ 83.50 ರಿಂದ 94 ಅಂಕ ಗಳಿಸಿದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆಯಲ್ಲಿ ಒಟ್ಟು 50ಕ್ಕೆ 40 ಅಂಕಗಳನ್ನು ನೀಡಲಾಗಿದೆ. ಲಿಖಿತ ಪರೀಕ್ಷೆಯಲ್ಲಿ 69 ಅಂಕ ಗಳಿಸಿದ ಅಭ್ಯರ್ಥಿಗೆ ಸಂದರ್ಶನದಲ್ಲಿ 39 ಅಂಕ ಕೊಡಲಾಗಿದೆ. ಆದರೆ 236 ಅಂಕ ಗಳಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಅಭ್ಯರ್ಥಿಗೆ ಸಂದರ್ಶನದಲ್ಲಿ ಕೇವಲ 13.25 ಅಂಕ ನೀಡಲಾಗಿದೆ ಎಂದು ಅವರು ವಿವರಿಸಿದರು.
ಈ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೀಗೆ ಅಂಕ ನೀಡಲಾಗಿದೆ. ಇದನ್ನು ಸ್ಪಷ್ಟವಾಗಿ ಗಮನಿಸಿದರೆ ಎಇ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಕಂಡು ಬರುತ್ತದೆ ಎಂದು ಅವರು ಹೇಳಿದರು.

ಶೇ.25ರಷ್ಟು ಮಂದಿಗೆ ಸಮಾನ ಅಂಕ
ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕವು ಸಂದರ್ಶನ ಮಂಡಳಿಯ ನಾಲ್ವರು ಸದಸ್ಯರು ನೀಡಿದ ಅಂಕಗಳ ಸರಾಸರಿ ಆಗಬೇಕು. ಹೀಗಿದ್ದರೂ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 25ರಷ್ಟು ಮಂದಿಗೆ ಒಂದೇ ಸಮನಾಗಿ ಅದೂ 40 ಅಂಕಗಳನ್ನು ನೀಡಿರುವುದು ಹೇಗೆ? ಎಂದು ಅವರು ಪ್ರಶ್ನಿಸಿದರು. ಅವರೆಲ್ಲರಿಗೂ ಈ 497 ಅಭ್ಯರ್ಥಿಗಳೂ ಅತ್ಯಂತ ಪ್ರತಿಭಾನ್ವಿತರು ಎಂದು ಅನಿಸಿದ್ದಲ್ಲಿ, ಕೆಲವರಿಗಾದರೂ 40ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿಬಹುದಿತ್ತಲ್ಲವೇ?. ಕೆಪಿಎಸ್‌ಸಿ ಮಾಡಿದ ಈ ಅಕ್ರಮದ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ತಿಂಗಳೊಳಗೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಮುಕುಂದ್ ಗೌಡ ಒತ್ತಾಯಿಸಿದರು.
ಲೋಕೋಪಯೋಗಿ ಇಲಾಖೆ (PWD) ಸಹಾಯಕ ಎಂಜಿನಿಯರ್ ಹುದ್ದೆ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯಲ್ಲಿ, ಹಣ ನೀಡಿದ ಅಭ್ಯರ್ಥಿಗಳಿಗೆ ಗರಿಷ್ಠ ಹಾಗೂ ಉಳಿದವರಿಗೆ ಕನಿಷ್ಠ ಅಂಕಗಳನ್ನು ನೀಡಿ ಅನ್ಯಾಯ ಎಸಗಲಾಗಿದೆ. 40 ಅಂಕ ಪಡೆದ ಬಹುತೇಕ ಅಭ್ಯರ್ಥಿಗಳು 30 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ಹಣ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಪಿಎಸ್‌ಸಿಯಲ್ಲಿನ ಸಾಲು ಸಾಲು ಅಕ್ರಮಗಳಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಗಳು ಗಗನ ಕುಸುಮವಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.












Click it and Unblock the Notifications