ಭಾನುವಾರ ಉಡುಪಿಯಲ್ಲಿ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅಂತ್ಯಕ್ರಿಯೆ
ಬೆಂಗಳೂರು, ಡಿಸೆಂಬರ್ 29 : ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಅಂತ್ಯಕ್ರಿಯೆ ಭಾನುವಾರ ಉಡುಪಿಯಲ್ಲಿ ನಡೆಯಲಿದೆ. ಶನಿವಾರ ಮಧ್ಯಾಹ್ನ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ.
ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಧುಕರೆ ಶೆಟ್ಟಿ (47) ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ 2ಗಂಟೆಗೆ ವೇಳೆಗೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಯಲಹಂಕದಲ್ಲಿ ಅಂತಿಮ ದರ್ಶನ : ಬೆಂಗಳೂರಿನ ಯಲಹಂಕದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 8.30ರ ಬಳಿಕ ಪಾರ್ಥಿವ ಶರೀರವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಬಳಿಕ ರಸ್ತೆ ಮಾರ್ಗವಾಗಿ ಉಡುಪಿಗೆ ತೆಗೆದುಕೊಂಡು ಹೋಗಲಾಗುತ್ತದೆ.

ಉಡುಪಿಯಲ್ಲಿ ಅಂತಿಮ ದರ್ಶನದ ಬಳಿಕ ಕುಂದಾಪುರ ತಾಲೂಕಿನಲ್ಲಿರುವ ಯಡಾಡಿ ಫಾರ್ಮ ಹೌಸ್‌ನಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಆಸ್ಪತ್ರೆಯ ಹೇಳಿಕೆ : ಮಧುಕರ ಶೆಟ್ಟಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರಿಗೆ ತೀವ್ರ ಜ್ವರ ಮತ್ತು ಉಸಿರಾಟದ ಸಮಸ್ಯೆ ಇತ್ತು. ತಕ್ಷಣ ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಯಿತು.
ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾದಾಗ ವೆಂಟಿಲೇಟರ್ ಅಳವಡಿಸಲಾಯಿತು. ವೈದ್ಯರ ತಂಡ ನಿರಂತರ ಚಿಕಿತ್ಸೆ ನೀಡಿದರೂ ಆರೋಗ್ಯ ಸುಧಾರಿಸಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಮಧುಕರ ಶೆಟ್ಟಿ ಮೃತಪಟ್ಟಿದ್ದಾರೆ ಎಂದು ಕಾಂಟಿನೆಂಟಲ್ ಆಸ್ಪತ್ರೆ ಹೇಳಿದೆ.











Click it and Unblock the Notifications