Women's day: ಅಂತಾರಾಷ್ಟ್ರೀಯ ಮಹಿಳಾ ದಿನ ಸಂಭ್ರಮ; ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆಗೆ ಚಾಲನೆ
ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆಯಡಿ ಒಟ್ಟು 50,000 ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ನೀಡಿ ಉದ್ಯಮ ಕೈಗೊಳ್ಳಲು ಬೆಂಬಲಿಸಲಾಗುವುದು.
ಬೆಂಗಳೂರು, ಮಾರ್ಚ್ 08: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದಲ್ಲಿ 'ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆ'ಗೆ ಚಾಲನೆ ನೀಡಿದ್ದಾರೆ. ಇದರ ಜೊತೆಗೆ ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದ 500 ಕೋಟಿ ರೂಪಾಯಿ ವಿಶೇಷ ಸಮುದಾಯ ಬಂಡವಾಳ ನಿಧಿ ಪೈಕಿ ಮೊದಲ ಹಂತದಲ್ಲಿ ರೂ 100 ಕೋಟಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶೇಷ ಸಮುದಾಯ ಬಂಡವಾಳ ನಿಧಿಯ ಉಳಿದ ಹಣವನ್ನು ಮುಂದಿನ ಪ್ರತಿವಾರ ಕಂತುಗಳಲ್ಲಿ ಬಿಡುಗಡೆಗೊಳಿಸಿ, ಏಪ್ರಿಲ್ ತಿಂಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮಹಿಳಾ ಸ್ವಸಹಾಯ ಗುಂಪುಗಳ ಕಾರ್ಯ ಚಟುವಟಿಕೆಗಳಿಗೆ ಚಾಲನೆ ಕೊಡಲಾಗುವುದು ಎಂದಿದ್ದಾರೆ.

ಈ ಯೋಜನೆಯಡಿ 500 ಕೋಟಿ ರೂಪಾಯಿ ಹಣವನ್ನು 50,000 ಸ್ವಸಹಾಯ ಸಂಘಗಳಿಗೆ ತಲಾ 1 ಲಕ್ಷದಂತೆ ನೀಡುವುದು ಸರ್ಕಾರದ ಗುರಿ. ಈಗ ಮೊದಲ ಹಂತದ 100 ಕೋಟಿಯಲ್ಲಿ 9,890 ಮಹಿಳಾ ಸ್ವ ಸಹಾಯ ಗುಂಪುಗಳಿಗೆ ತಲಾ 1 ಲಕ್ಷ ರೂಪಾಯಿಯನ್ನು ಕೊಡಲಾಗಿದೆ. ಇದರ ಜೊತೆಗೆ 11 ಕ್ಯಾಂಟೀನ್, 9 ಸ್ಯಾನಿಟರಿ ಪ್ಯಾಡ್, 24 ಚಿಕ್ಕಿ ಘಟಕ ಸೇರಿ 44 ಘಟಕಗಳಿಗೆ ತಲಾ 2.5 ಲಕ್ಷ ಕೊಡಲಾಗಿದೆ. ಫಲಾನುಭವಿ ಸಂಘಗಳ ಖಾತೆಗೆ ನೇರವಾಗಿ ಆನ್ ಲೈನ್ ಮೂಲಕ ಜಮೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
"ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ" ಯೋಜನೆಯಡಿ ಮುಖ್ಯವಾಗಿ ಪ್ರತಿ ಜಿಲ್ಲೆಯಲ್ಲಿ 3 ಉದ್ಯಮ ಘಟಕಗಳು ಮತ್ತು 15 ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು 50,000 ಫಲಾನುಭವಿ ಸಂಘಗಳನ್ನು ಗುರುತಿಸಲಾಗಿದೆ. ಶುದ್ದ ಗಾಣದ ಎಣ್ಣೆ, ಫ್ಲೋರ್ ಕ್ಲೀನರ್, ಉಪ್ಪಿನಕಾಯಿ, ಹಣ್ಣಿನ ಜಾಮ್, ಬಾಳೆಕಾಯಿ, ಹಲಸಿನ ಚಿಪ್ಸ್, ಜೋಳದ ರೊಟ್ಟಿ, ಹಪ್ಪಳ, ಮಣ್ಣಿನ ವಸ್ತುಗಳು, ಗೃಹೋಪಯೋಗಿ ಹಾಗೂ ಗೃಹ ಅಲಂಕಾರಿಕ ವಸ್ತುಗಳು, ಸೆಣಬಿನ ಕೈ ಚೀಲಗಳು, ರಾಗಿ ಬಿಸ್ಕತ್ತು, ಯೋಗ ಮ್ಯಾಟ್ ಇತ್ಯಾದಿ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಯಿದೆ" ಎಂದು ಸಿಎಂಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆಯಡಿ ಒಟ್ಟು 50,000 ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ನೀಡಿ ಉದ್ಯಮ ಕೈಗೊಳ್ಳಲು ಬೆಂಬಲಿಸಲಾಗುವುದು. ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ತಾಂತ್ರಿಕ ಸಂಸ್ಥೆಗಳನ್ನು ಗುರುತಿಸಲಾಗಿದೆ. ಸ್ವಸಹಾಯ ಗುಂಪಿನ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಉತ್ಪಾದಿಸಲು ಅನುಕೂಲವಾಗುವಂತೆ 2ನೇ ಹಂತದಲ್ಲಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಒಟ್ಟು 3,500 ಫಲಾನುಭವಿಗಳಿಗೆ ಸಾಲ ಮಂಜೂರಾಗಿದೆ. .
ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯ ಸರ್ಕಾರವು 2023-24ನೇ ಸಾಲಿನ ಆಯವ್ಯಯದಲ್ಲಿ ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಒಟ್ಟಾರೆ ರೂ. 46,278 ಕೋಟಿಗಳ ಅನುದಾನ ಒದಗಿಸಿದೆ. ಪ್ರಸಕ್ತ ಸಾಲಿನಲ್ಲಿ 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ 1,800 ಕೋಟಿ ರೂ. ಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಗುರಿ ಇದೆ ಎಂದಿದ್ದಾರೆ.
"ಗೃಹಿಣಿ ಶಕ್ತಿ ಯೋಜನೆಯಡಿ ಭೂರಹಿತ ರೈತ ಮಹಿಳೆಯರಿಗಾಗಿ ಮಾಸಿಕ ರೂ. 500 ಗಳನ್ನು ನೀಡಲಾಗುವುದು. 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು, ಮಹಿಳೆಯರ ಅಪೌಷ್ಟಿಕತೆ ತಡೆಯಲು ಅಂಗನವಾಡಿಗಳ ಮೂಲಕ ಬಿಸಿಯೂಟ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ 350 ಕೊಟಿ ರೂ.ಗಳ ವೆಚ್ಚದಲ್ಲಿ ಉಚಿತ ಬಸ್‌ಪಾಸ್ ಸೌಲಭ್ಯ ಒದಗಿಸಲಾಗುತ್ತಿದ್ದು, ಒಟ್ಟು 8 ಲಕ್ಷ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ನಗರ ಪ್ರದೇಶದಲ್ಲಿ 4,000 ಶಿಶುಪಾಲನಾ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಾಗುವುದು" ಎಂದು ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.












Click it and Unblock the Notifications