ಪಿಗ್ಗಿ ಬ್ಯಾಂಕ್‌ನಿಂದ ಷೇರು ಮಾರುಕಟ್ಟೆಯವರೆಗೆ: 15ರ ಹರೆಯದಲ್ಲಿ ₹13.9 ಲಕ್ಷದ ಒಡತಿಯಾದ ಬೆಂಗಳೂರಿನ ಬಾಲೆ

ಮಕ್ಕಳು ಪಾಕೆಟ್ ಮನಿಗಾಗಿ ಪೋಷಕರನ್ನ ಅವಲಂಬಿಸುವ ಹಾಗೂ ಹಣದ ಮಹತ್ವವನ್ನೇ ಅರಿಯದ ಈ ಹದಿಹರೆಯದ ವಯಸ್ಸಿನಲ್ಲಿ, ಬೆಂಗಳೂರಿನ 15 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ತನ್ನದೇ ಆದ ಬರೋಬ್ಬರಿ ₹13.9 ಲಕ್ಷ ರೂಪಾಯಿ ಮೌಲ್ಯದ ಹೂಡಿಕೆ ಪೋರ್ಟ್‌ಫೋಲಿಯೋ ನಿರ್ವಹಣೆ ಮಾಡುತ್ತಿದ್ದಾಳೆ.

ಹೌದು, ಆರ್.ಆರ್. ನಗರದ ಸ್ವರ್ಗರಾಣಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಿಂಚನಾ ಸಂತೋಷ್, ಇಂದು ಎಲ್ಲರಿಗೂ ಅಚ್ಚರಿಯಾಗುವಂತಹ ಆರ್ಥಿಕ ಜ್ಞಾನ ಹೊಂದಿದ್ದಾಳೆ. ಒಂದು ಪುಟ್ಟ ಪಿಗ್ಗಿ ಬ್ಯಾಂಕ್‌ನಲ್ಲಿ ಹಣ ಕೂಡಿಡುವ ಹವ್ಯಾಸದಿಂದ ಶುರುವಾದ ಈಕೆಯ ಪಯಣ, ಇಂದು ದೇಶ-ವಿದೇಶಗಳ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.

Inspiring How A 15-Year-Old Bengaluru Student Built A 13 9 Lakh Investment Portfolio From Scratch

ಪಿಗ್ಗಿ ಬ್ಯಾಂಕ್‌ನಿಂದ ಆರಂಭವಾದ ಉಳಿತಾಯ ಅಭ್ಯಾಸ

ಸಿಂಚನಾ ಅವರ ಈ ಹಣ ಉಳಿಸುವ ಅಭ್ಯಾಸ ಬಹಳ ಚಿಕ್ಕ ವಯಸ್ಸಿನಲ್ಲೇ ಅವರಲ್ಲಿ ಗಟ್ಟಿಯಾಗಿದೆ. ಆಕೆಗೆ ಕೇವಲ 12 ವರ್ಷ ವಯಸ್ಸಿದ್ದಾಗ ತನ್ನ ಪಿಗ್ಗಿ ಬ್ಯಾಂಕ್‌ನಲ್ಲಿ ಸುಮಾರು 10,000 ರೂಪಾಯಿಗಳನ್ನ ಉಳಿತಾಯ ಮಾಡಿದ್ದಳು. "ಆ ವಯಸ್ಸಿನಲ್ಲಿ 10,000 ರೂ. ಎಂದರೆ ನನಗೆ ಬಹುದೊಡ್ಡ ಮೊತ್ತವಾಗಿತ್ತು. ಪ್ರತೀ ಬಾರಿ ಪಿಗ್ಗಿ ಬ್ಯಾಂಕ್‌ಗೆ ಹಣ ಹಾಕುವಾಗಲೂ ಹಾಗೂ ಆ ಹಣ ಮೆಲ್ಲನೆ ಹೆಚ್ಚಾಗುವುದನ್ನಾ ನೋಡುವಾಗ ನನಗೆ ತುಂಬಾ ಹೆಮ್ಮೆಯೆನಿಸುತ್ತಿತ್ತು," ಎಂದು ಆಕೆ ತನ್ನ ಆರಂಭಿಕ ದಿನಗಳನ್ನ ಸ್ಮರಿಸಿಕೊಳ್ಳುತ್ತಾಳೆ.

ಹಣದ ಮೌಲ್ಯವನ್ನ ಅರ್ಥಮಾಡಿಕೊಳ್ಳಲು ಪೋಷಕರಾದ ಸಂತೋಷ್ ಕುಮಾರ್ ಹಾಗೂ ಕೀರ್ತಿ ರಾಯ್ಕರ್ ಅವರು ಸಿಂಚನಾಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಒಮ್ಮೆ ಸಿಂಚನಾ ಟೆಲಿಸ್ಕೋಪ್ ಒಂದನ್ನು ಖರೀದಿಸಲು ಇಚ್ಛಿಸಿದಾಗ, ಆಕೆಯ ತಂದೆ ಪೂರ್ತಿ ಹಣ ಕೊಡುವ ಬದಲು, ಸ್ವತಃ ಹಣ ಹೊಂದಿಸುವಂತೆ ಸೂಚಿಸಿದ್ದರು.

ಆಗ ಆಕೆ ತನ್ನ ಸಂಬಂಧಿಕರಿಂದ 10,000 ರೂಪಾಯಿಗಳನ್ನ ಸಂಗ್ರಹಿಸಿದಳು, ಉಳಿದ 2,000 ರೂಪಾಯಿಗಳನ್ನ ಪೋಷಕರು ನೀಡಿದರು. ಈ ಒಂದು ಘಟನೆ ಆಕೆಗೆ ಹಣ ಉಳಿತಾಯದ ನಿಜವಾದ ಶಕ್ತಿಯನ್ನು ಪರಿಚಯಿಸಿತು.

ಹದಿಹರೆಯದ ಹೂಡಿಕೆಗಾರ್ತಿಯ ಯಶಸ್ಸಿನ 'GDP' ಮಂತ್ರ

ಪ್ರಸ್ತುತ ಸಿಂಚನಾ ತನ್ನ ಪೋಷಕರ ನಿರಂತರ ಮಾರ್ಗದರ್ಶನದಲ್ಲಿ ಹೂಡಿಕೆಗಳನ್ನ ಮಾಡುತ್ತಿದ್ದಳು. ಆಕೆಯ ಹಣವು ಭಾರತೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಈಕ್ವಿಟಿಗಳು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಹಂಚಿಕೆಯಾಗಿದೆ. ಮುಂದೆ ತಾನು ಮಾಡಲಿರುವ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಈ ಹಣವನ್ನ ಬಳಸಿಕೊಳ್ಳುವುದು ಆಕೆಯ ಮುಂದಿರುವ ಏಳು ವರ್ಷಗಳ ಗುರಿಯಾಗಿದೆ.

ಮ್ಯೂಚುವಲ್ ಫಂಡ್‌ಗಳನ್ನ ಆಯ್ಕೆ ಮಾಡುವಾಗ ಸಿಂಚನಾ 'GDP' ಎಂಬ ತನ್ನದೇ ಆದ ಸರಳ ಸೂತ್ರವನ್ನು ಪಾಲಿಸುತ್ತಾಳೆ. G ಎಂದರೆ 'Growth' ಅಂದರೆ ತಕ್ಷಣಕ್ಕೆ ಹಣದ ಅಗತ್ಯವಿಲ್ಲದ ಕಾರಣ ಬೆಳವಣಿಗೆಯತ್ತ ಗಮನ, D ಎಂದರೆ 'Direct' ಅಂದರೆ ಮಧ್ಯವರ್ತಿಗಳ ವೆಚ್ಚವನ್ನು ತಗ್ಗಿಸಲು ನೇರ ಹೂಡಿಕೆ. ಹಾಗೂ P ಎಂದರೆ 'Passive' ಇದರ ಅರ್ಥ ಬೆಂಚ್‌ಮಾರ್ಕ್ ಸೂಚ್ಯಂಕಗಳನ್ನ ಟ್ರ್ಯಾಕ್ ಮಾಡುವ ನಿಷ್ಕ್ರಿಯ ಫಂಡ್‌ಗಳು.

ಕೇವಲ ಪುಸ್ತಕದ ಬದನೆಕಾಯಿಗೆ ಸೀಮಿತವಾಗದೆ, ಆಕೆ ಈಗಾಗಲೇ NISM (National Institute of Securities Markets)ನ ಎರಡು ಪ್ರಮಾಣಪತ್ರಗಳನ್ನ ಹಾಗೂ SEBIಯ ಒಂದು ಸರ್ಟಿಫಿಕೇಟ್ ಅನ್ನು ಪೂರ್ಣಗೊಳಿಸಿದ್ದಾಳೆ. ಇವೆಲ್ಲದಕ್ಕೂ ಆಕೆಗೆ ದೊಡ್ಡ ಮಟ್ಟದಲ್ಲಿ ಯೂಟ್ಯೂಬ್ ನೆರವಾಗಿದೆ.

ಹಣಕಾಸು ಸಾಕ್ಷರತೆ ಮೂಡಿಸಲು ವಿನೂತನ ಗೇಮ್ ಆವಿಷ್ಕಾರ

ಸಿಂಚನಾಳ ಆಸಕ್ತಿ ಕೇವಲ ಹೂಡಿಕೆಗೆ ಮಾತ್ರ ಸೀಮಿತವಾಗಿಲ್ಲ. 14ನೇ ವಯಸ್ಸಿನಲ್ಲಿಯೇ ಆಕೆ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನ ಆಧರಿಸಿದ "ಇತಿಹಾಸ - ದಿ ರಾಯಲ್ ಗೇಮ್" ಎಂಬ ಇತಿಹಾಸ ಆಧಾರಿತ ಕಾರ್ಡ್ ಗೇಮ್ ಅನ್ನ ಅಭಿವೃದ್ಧಿಪಡಿಸಿದ್ದಳು.

ಅದಾಗಲೇ 170 ಗೇಮ್ ಸೆಟ್‌ಗಳನ್ನ ಬೆಂಗಳೂರಿನ 36 ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀಡಿ, ಅದನ್ನು ಹೇಗೆ ಬಳಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯರಿಗೆ ತರಬೇತಿಯನ್ನೂ ನೀಡಿದ್ದಾಳೆ.

ಇದೀಗ ಆಕೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ವಿದ್ಯಾರ್ಥಿಗಳಿಗೆ ಬಜೆಟ್, ಬ್ಯಾಂಕಿಂಗ್, ಬಡ್ಡಿ, ಹಣದುಬ್ಬರ, ಸಾಲ, ವಿಮೆ, ಅಪಾಯ ಮತ್ತು ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಲು 'ಹಣಕಾಸು ಕಾರ್ಡ್ ಗೇಮ್' ಒಂದನ್ನು ಸಿದ್ಧಪಡಿಸುತ್ತಿದ್ದಾಳೆ.

ಶಾಲಾ ಕೊಠಡಿಯ ನೀರಸ ಪಾಠಗಳಿಗಿಂತ, ಇಂತಹ ಸಂವಾದಾತ್ಮಕ ಆಟಗಳ ಮೂಲಕ ಭಾರತದಾದ್ಯಂತ ಒಂದು ಮಿಲಿಯನ್ (10 ಲಕ್ಷ) ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತೆ ಕಲಿಸುವುದು ಈ 15 ವರ್ಷದ ಬಾಲಕಿಯ ಬಹುದೊಡ್ಡ ಕನಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+