ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆಯಬೇಕಿದ್ದ ಇನ್ಸ್‌ಪೆಕ್ಟರ್ ಪರಾರಿ!
ಬೆಂಗಳೂರು, ಏಪ್ರಿಲ್ 02: ಬುಧವಾರ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆಯಬೇಕಿದ್ದ ಇನ್ಸ್‌ಪೆಕ್ಟರ್ ಪರಾರಿಯಾಗಿದ್ದಾರೆ. ಬೆಂಗಳೂರಿನ ಕೋರಮಂಗಲ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕಗಳನ್ನು ಪ್ರದಾನ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಬೆಂಗಳೂರು ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕುಮಾರ್ ಆಯ್ಕೆಯಾಗಿದ್ದರು. ಅವರು ಇಂದು ಮುಖ್ಯಮಂತ್ರಿಗಳಿಂದ ಪದಕ ಪಡೆಯಬೇಕಿತ್ತು. ಆದರೆ ಮಂಗಳವಾರ ರಾತ್ರಿಯೇ ಅವರು ಪರಾರಿಯಾಗಿದ್ದಾರೆ.

ಬಂಧನ ಭೀತಿಯಲ್ಲಿ ಪರಾರಿ: ಮಂಗಳವಾರ ಲಂಚ ಪ್ರಕರಣದ ಡೀಲ್ ಒಂದನ್ನು ನಡೆಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಲು ಆಗಮಿಸುತ್ತಿದ್ದರು. ಇದನ್ನು ಅರಿತ ಕುಮಾರ್ ಪರಾರಿಯಾಗಿದ್ದು, ಇತರರನ್ನು ಪೊಲೀಸರು ಬಂಧಿಸಿದ್ದರು.
ನಿನ್ನ ಸಂಜೆ ನಾಗರಬಾವಿಯ ಹೋಟೆಲ್ ಬಳಿ ಪೊಲೀಸ್ ಜೀಪ್ ಬಿಟ್ಟು ಕುಮಾರ್ ಪರಾರಿಯಾಗಿದ್ದಾರೆ. ಸಂಜೆ 5 ಗಂಟೆಯಿಂದ ಇಂದು ಮುಂಜಾನೆ 3 ಗಂಟೆಯ ತನಕ ಹುಡುಕಿದರೂ ಸಹ ಕುಮಾರ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಲ್ಲ.
ಸುಳ್ಳು ಕೇಸು ದಾಖಲು ಮಾಡಿ 4 ಕೋಟಿ ರೂ. ಮೌಲ್ಯದ ಮನೆಯನ್ನು ಮಾರಾಟ ಮಾಡಿಸುವ ಡೀಲ್ ಇದಾಗಿತ್ತು. ಇದಕ್ಕಾಗಿ ಲಂಚ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಲು ಆಗಮಿಸುತ್ತಿದ್ದರು. ಈ ಕುರಿತು ಮಾಹಿತಿ ಪಡೆದು ಕುಮಾರ್ ಪರಾರಿಯಾಗಿದ್ದಾರೆ.
ಗುತ್ತಿಗೆದಾರರೊಬ್ಬರ ಪತ್ನಿ ಅನುಷಾ ಎಂಬುವವರಿಗೆ ಮನೆ ಮಾರಾಟ ಮಾಡಿಕೊಡಲು ಕುಮಾರ್ ಕಿರುಕುಳ ನೀಡಿದ್ದಾರೆ ಎಂಬುದು ಆರೋಪವಾಗಿದೆ. ಕಡಿಮೆ ಮೊತ್ತಕ್ಕೆ ಮನೆ ನೋಂದಣಿ ಮಾಡಿಕೊಡದಿದ್ದರೆ ಸುಳ್ಳು ಕೇಸು ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಗುತ್ತಿಗೆ ಚನ್ನೇಗೌಡ ಪತ್ನಿ ಅನುಷಾ ಮನೆಗೆ ಪುಂಡರನ್ನು ನುಗ್ಗಿಸಿ ಗಲಾಟೆ ಮಾಡಿಸಿದ್ದಾರೆ ಎಂಬ ಆರೋಪವೂ ಕುಮಾರ್ ಮೇಲಿದೆ. ಈ ಗಲಾಟೆಯ ವಿಡಿಯೋವನ್ನು ಅವರು ಮಾಡಿಕೊಟ್ಟುಕೊಂಡಿದ್ದರು. ವಿಡಿಯೋ ಡಿಲೀಟ್ ಮಾಡುವಂತೆ ಕುಮಾರ್ ಒತ್ತಡ ಹಾಕುತ್ತಿದ್ದರು.
ದಿವ್ಯಾ ಎನ್ನುವ ಹೆಸರಿಗೆ ಮನೆಯನ್ನು ಮಾರಾಟ ಮಾಡಲು ಅಗ್ರಿಮೆಂಟ್‌ಗೆ ಸಹಿ ಹಾಕಲು ಮಂಗಳವಾರ ಸಂಜೆ ಹೋಟೆಲ್‌ಗೆ ಎಲ್ಲರನ್ನು ಕರೆಸಲಾಗಿತ್ತು. ಆಗ ಲೋಕಾಯುಕ್ತರು ದಾಳಿ ಮಾಡಲು ಬರುವ ಸೂಚನೆ ಸಿಕ್ಕಿ ಕುಮಾರ್ ಪರಾರಿಯಾಗಿದ್ದರು. ಇಂದು ಮುಂಜಾನೆ ತನಕ ಹುಡುಕಾಟ ನಡೆಸಿದರೂ ಅವರು ಸಿಕ್ಕಿಲ್ಲ. ಆದ್ದರಿಂದ ಚಿನ್ನದ ಪದಕ ಪಡೆಯುವ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಮಂಗಳವಾರ ಸಂಜೆ ಲೋಕಾಯುಕ್ತರು ದಾಳಿ ನಡೆಸಿದಾಗ ಇಬ್ಬರು ಕಾನ್ಸ್‌ಟೇಬಲ್‌ಗಳಾದ ಉಮೇಶ್, ಅನಂತ್ ಸೋಮಶೇಖರ್ ಆರಾಧ್ಯ, ಖರೀದಿದಾರ ಗವಿಗೌಡ, ದಿನೇಶ್ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಇನ್ಸ್‌ಪೆಕ್ಟರ್ ಕುಮಾರ್ ಪತ್ತೆಯಾಗಿಲ್ಲ.
ಕೋರಮಂಗಲ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಮುಂತಾದವರು ಉಪಸ್ಥಿತರಿದ್ದರು.
ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಕಾನೂನು ಸುವ್ಯವಸ್ಥೆ ಮತ್ತು ಬಂಡವಾಳ ಹೂಡಿಕೆ, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಒಂದಕ್ಕೊಂದು ನೇರ ಸಂಬಂಧ ಹೊಂದಿದೆ. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆ ಆಗ್ತಿದೆ. ಇದನ್ನು ನಿರ್ವಹಿಸಬೇಕಾದರೆ ಕಾನೂನು ಸುವ್ಯವಸ್ಥೆ , ಶಾಂತಿ ಪಾಲನೆ ಉತ್ತಮವಾಗಿರಬೇಕು' ಎಂದರು.
'ತಂತ್ರಜ್ಞಾನದ ಬೆಳವಣಿಗೆಯಿಂದ ಸೈಬರ್ ಅಪರಾಧಗಳು ವ್ಯಾಪಕವಾಗಿ ಹೆಚ್ವುತ್ತಿವೆ. ಅದೇ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ನಿಗ್ರಹಿಸಬೇಕು. ಮಾದಕ ವಸ್ತು ಮುಕ್ತ ರಾಜ್ಯ ಮಾಡುವುದು ನನ್ನ ಗುರಿ. ಇದಕ್ಕಾಗಿ ಬಹಳಷ್ಟು ಶ್ರಮಿಸಬೇಕು. ಪೊಲೀಸರು ಮಾದಕ ವಸ್ತು ಜಾಲವನ್ನು ಬೇರು ಸಮೇತ ಕಿತ್ತಾಕಲು ಪಣ ತೊಡಬೇಕು' ಎಂದು ಕರೆ ನೀಡಿದರು.












Click it and Unblock the Notifications