ಇನ್‌ಫೋಸಿಸ್‌ನ 32.6 ದಶಲಕ್ಷ ಷೇರು ಮಾರಾಟಕ್ಕೆ
ಬೆಂಗಳೂರು, ಡಿ. 8: ಸ್ಥಾಪಕರು ಹೊರಬಂದ ನಂತರ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದ ಕರ್ನಾಟಕ ಮೂಲದ ಇನ್‌ಫೋಸಿಸ್ ಕಂಪನಿಯು ವಿಶಾಲ್ ಸಿಕ್ಕಾ ಅವರು ಸಿಇಓ ಆಗಿ ಆಯ್ಕೆಯಾದ ನಂತರ ಚೇತರಿಸಿಕೊಂಡಿತ್ತು. ಆದರೆ, ಸೋಮವಾರ ಮತ್ತೆ ಕಂಪನಿಯ ಷೇರು ದರ ಶೇ. 3ರಷ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್‌ಫೋಸಿಸ್‌ನ ನಾಲ್ವರು ಸಂಸ್ಥಾಪಕರು ತಮ್ಮಲ್ಲಿರುವ 32.6 ಮಿಲಿಯನ್ ಷೇರುಗಳನ್ನು ಮಾರಾಟಕ್ಕೆ ಮುಂದಾಗಿದ್ದಾರೆ. [ಇನ್ ಫೋಸಿಸ್ ಗೊಣಗಾಟ-ಸರ್ಕಾರ ಗೋಣಾಡಿಸಬೇಕೆ?]
ಇನ್‌ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ, ನಂದನ್ ನಿಲೇಕಣಿ, ಎಸ್.ಡಿ. ಶಿಬುಲಾಲ್ ಮತ್ತು ಕೆ. ದಿನೇಶ್ ಅವರು ತಲಾ 1,988 ಕೋಟಿ ರೂ. ಮೊತ್ತದ ಷೇರುಗಳನ್ನು ಶೇ. 4ರಷ್ಟು ರಿಯಾಯಿತಿ ದರದಲ್ಲಿ ಮಾರಲು ನಿರ್ಧರಿಸಿದ್ದಾರೆ. ಡುಯೆಚ್ ಬ್ಯಾಂಕ್ ಈ ಷೇರುಗಳ ಮಾರಾಟದ ಹೊಣೆ ಹೊತ್ತಿದೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಇನ್‌ಫೋಸಿಸ್ ಕಾರ್ಯನಿರ್ವಾಹಕ ಅಧಿಕಾರಿಗಳು ನಿರಾಕರಿಸಿದ್ದಾರೆ. [ಇನ್ ಫೋಸಿಸ್ ಶಿಫ್ಟಿಂಗ್: ಸಿಎಂ ಜಾಣ ಉತ್ತರ]

ವಿಶಾಲ್ ಸಿಕ್ಕಾ ಬಂದ ನಂತರ ಈ ಬೆಳವಣಿಗೆ...
ಇನ್‌ಫೋಸಿಸ್ ಸಂಸ್ಥೆಯು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ಹೊರಗಿನ ವ್ಯಕ್ತಿಯೋರ್ವರನ್ನು (ವಿಶಾಲ್ ಸಿಕ್ಕಾ) ಇದೇ ಪ್ರಥಮ ಬಾರಿಗೆ ನೇಮಿಸಿದ ಕೆಲವೇ ತಿಂಗಳುಗಳಲ್ಲಿ ಈ ಬೆಳವಣಿಗೆ ನಡೆದಿರುವುದು ಗಮನೀಯ ಅಂಶ. ವಿಶಾಲ್ ಸಿಕ್ಕಾ ಬರುವಷ್ಟರಲ್ಲಿ ಎಲ್ಲ ಕಾರ್ಯನಿರ್ವಾಹಕರೂ ಕಂಪನಿ ತೊರೆದಿದ್ದರು. [ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!]
ಪ್ರಸ್ತುತ ಮಾರಾಟಕ್ಕಿಟ್ಟಿರುವ ಷೇರುಗಳಿಂದ 1.1 ಬಿಲಿಯನ್ ಡಾಲರ್ ಆದಾಯ ಬರುವ ನಿರೀಕ್ಷೆಯಿದೆ. 2014ರ ಸೆಪ್ಟೆಂಬರ್ 30ರಂತೆ ಪ್ರಮೋಟರ್‌ಗಳು ಶೇ. 15.92 ರಷ್ಟು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶೇ. 42.67ರಷ್ಟು ಹಾಗೂ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಶೇ. 14.48 ರಷ್ಟು ಷೇರುಗಳನ್ನು ಹೊಂದಿದ್ದಾರೆ. [ಇನ್ ಫೋಸಿಸ್ ಗೆ ಮರಳಲ್ಲ: ನೀಲೇಕಣಿ]
ಭಾರತದ ಷೇರುಗಳ ಬೆಲೆಯಲ್ಲಿ ಪ್ರಸಕ್ತ ವರ್ಷ ಶೇ. 35.4ರಷ್ಟು ಏರಿಕೆ ಕಂಡುಬಂದಿದ್ದರೆ, ಇನ್‌ಫೋಸಿಸ್ ಷೇರುಗಳು ಶೇ. 18.8ರಷ್ಟು ಏರಿಕೆ ಕಂಡಿವೆ. ಒಂದು ಕಾಲದಲ್ಲಿ ಅಮೆರಿಕ ಅಧ್ಯಕ್ಷರ ನಿದ್ದೆಗೆಡಿಸಿದ್ದ ಇನ್‌ಫೋಸಿಸ್ ಎಂಬ ಸಾಫ್ಟ್‌ವೇರ್ ಹೊರಗುತ್ತಿಗೆ ಪಡೆಯುವ ದೈತ್ಯ ಕಂಪನಿ ಆರ್ಥಿಕ ಚೇತರಿಕೆಗಾಗಿ ಕೈಗೊಳ್ಳುತ್ತಿರುವ ವಿವಿಧ ಕ್ರಮಗಳು ಟೆಕ್ಕಿಗಳಲ್ಲಿ ಹೊಸ ಆಸೆ ಸೃಷ್ಟಿಸಿದೆ.












Click it and Unblock the Notifications