Indira Canteen: ಶೀಘ್ರದಲ್ಲೇ ಕೆಐಎ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್, ಯಾರಿಗೆಲ್ಲ ಉಪಯೋಗ?-ಮಾಹಿತಿ ತಿಳಿಯಿರಿ
ಬೆಂಗಳೂರು, ಜನವರಿ, 26: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್, ಬಿಎಂಟಿಸಿ ಚಾಲಕರು ಮತ್ತು ಗ್ರೌಂಡ್ ಸಿಬ್ಬಂದಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸಲು ಬಿಬಿಎಂಪಿಯು ಟರ್ಮಿನಲ್-1ರ ಪಾರ್ಕಿಂಗ್ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ನಿರ್ಧರಿಸಿದೆ. ಹಾಗಾದರೆ ಯಾವಾಗ ಆರಂಭ ಹಾಗೂ ಮೆನು ವಿವರವನ್ನು ಇಲ್ಲಿ ತಿಳಿಯಿರಿ.
ಮೂಲಗಳ ಪ್ರಕಾರ, ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ವಿಕಾಸ್ ಕುಶೋರ್ ಮತ್ತು ಅವರ ತಂಡ ಕೆಐಎ ನಿರ್ವಾಹಕರು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಅಧಿಕಾರಿಗಳೊಂದಿಗೆ ಈ ಸ್ಥಳವನ್ನು ಪರಿಶೀಲಿಸಿದರು. ಅಡುಗೆ ಕೋಣೆ ಸಹಿತ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಕೆಲ ದಿನಗಳ ಹಿಂದೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಹೊಸ ಕ್ಯಾಂಟೀನ್ ಫೆಬ್ರವರಿ ಮಧ್ಯದ ವೇಳೆಗೆ ಆಹಾರವನ್ನು ನೀಡಲು ಸಿದ್ಧವಾಗಲಿದೆ. ಸಾರ್ವಜನಿಕರಿಗೆ 5 ರೂಪಾಯಿಗೆ ಉಪಹಾರ ಮತ್ತು ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು 10 ರೂಪಾಯಿಗೆ ನೀಡಲಾಗುತ್ತದೆ. ಮುಖ್ಯ ಆರೋಗ್ಯ ಅಧಿಕಾರಿ (ಬಿಬಿಎಂಪಿ) ಸೈಯದ್ ಸಿರಾಜುದ್ದೀನ್ ಮದಿನಿ ಅವರು ಆರಂಭದಲ್ಲಿ ಕೆಐಎಯಲ್ಲಿ ಒಂದು ಕ್ಯಾಂಟೀನ್ ಅನ್ನು ಪ್ರಾರಂಭಿಸುತ್ತಾರೆ. ಮತ್ತು ಅಗತ್ಯವಿದ್ದರೆ ಇನ್ನೊಂದನ್ನು ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಐಎಯಲ್ಲಿ ಎರಡು ಸೇರಿದಂತೆ ನಗರದಾದ್ಯಂತ ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಲು ನಾಗರಿಕ ಸಂಸ್ಥೆ ಟೆಂಡರ್‌ಗಳನ್ನು ನಡೆಸಿತ್ತು. ತಾಂತ್ರಿಕ ಮೌಲ್ಯಮಾಪನ ಪ್ರಕ್ರಿಯೆಯಲ್ಲಿದ್ದು, ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಅಲ್ಲಿಯವರೆಗೆ ವಿಮಾನ ನಿಲ್ದಾಣದಲ್ಲಿ ಕ್ಯಾಂಟೀನ್ ನಿರ್ವಹಣೆ ಮಾಡುವಂತೆ ಪಾಲಿಕೆಯು ಹಾಲಿ ಗುತ್ತಿಗೆದಾರರನ್ನು ಕೇಳಿದೆ.
ಟ್ಯಾಕ್ಸಿ ಚಾಲಕರು ಸಲ್ಲಿಸಿದ್ದ ಬೇಡಿಕೆಯಂತೆ ಸರ್ಕಾರ ಬಿಬಿಎಂಪಿಗೆ ಎರಡು ಇಂದಿರಾ ಕ್ಯಾಂಟೀನ್ ನಿರ್ಮಿಸುವಂತೆ ಆದೇಶಿಸಿತ್ತು. ಪ್ರಿಕಾಸ್ಟ್ ಮಾದರಿಯಲ್ಲಿ ಸದ್ಯ ಒಂದು ಕ್ಯಾಂಟೀನ್ ಕಟ್ಟಡ ನಿರ್ಮಿಸಲಾಗುತ್ತಿದೆ. ₹1.30 ಕೋಟಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ಜೊತೆಗೆ ಅಡುಗೆ ಮನೆಯನ್ನೂ ಪ್ರಿಕಾಸ್ಟ್ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ.
ಈ ಕ್ಯಾಂಟೀನ್‌ಗೆ ವ್ಯಕ್ತವಾಗುವ ಸ್ಪಂದನೆ ಆಧರಿಸಿ ಮತ್ತೊಂದು ಕ್ಯಾಂಟೀನ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸದ್ಯ ಕ್ಯಾಂಟೀನ್ ಮತ್ತು ಅಡುಗೆ ಮನೆಯನ್ನು ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿನ 7ನೇ ಪ್ಲಾಟ್‌ಫಾರಂನಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications