Indira Canteen: ಇಂದಿರಾ ಕ್ಯಾಂಟೀನ್ ಮೆನು ಉಲ್ಲಂಘನೆಗೆ "ರಿವಾರ್ಡ್ಸ್' ಸಂಸ್ಥೆಗೆ ನೋಟಿಸ್: ಜಿಬಿಎ
Indira Canteen: ಬೆಂಗಳೂರಿನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಮೆನು ಉಲ್ಲಂಘನೆಗೆ ಸಂಬಂಧಿಸಿದಂತೆ "ರಿವಾರ್ಡ್ಸ್' ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ. ಎನ್. ರಮೇಶ್ ಅವರು ಪಾಲಿಕೆಯ ಪಟ್ಟಾಭಿನಗರ ವಾರ್ಡ್ ವ್ಯಾಪ್ತಿಯ ಜಯನಗರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿ, ಆಹಾರದ ಗುಣಮಟ್ಟ, ಶುಚಿತ್ವ, ದಾಸ್ತಾನು ಹಾಗೂ ಸಾರ್ವಜನಿಕರಿಗೆ ವಿತರಿಸಲಾಗುತ್ತಿರುವ ಆಹಾರದ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮೆನು ಉಲ್ಲಂಘನೆ ಆಗಿರುವುದು ಬೆಳಕಿಗೆ ಬಂದಿದೆ.

ಮೆನು ಉಲ್ಲಂಘನೆಗೆ ಆಯುಕ್ತರ ತೀವ್ರ ಅಸಮಾಧಾನ
ಶನಿವಾರದ ನಿಗದಿತ ಮೆನುವಿನಂತೆ ಅನ್ನ, ಸಾಂಬಾರ್, ಪಲ್ಯ ಮತ್ತು ಖೀರು (ಪಾಯಸ) ವನ್ನು ಇಂದಿರಾ ಕ್ಯಾಂಟಿನ್ ಗೆ ಪೂರೈಸಬೇಕಾಗಿದ್ದು, ಗುತ್ತಿಗೆ ಸಂಸ್ಥೆಯಿಂದ ಕೇವಲ ಬಿಸಿಬೇಳೆಬಾತ್ ಮಾತ್ರ ಪೂರೈಕೆಯಾಗಿರುತ್ತದೆ. ಕಳೆದ ನಾಲ್ಕೈದು ದಿನಗಳಿಂದಲೂ ಇದೇ ರೀತಿ ಮೆನು ಉಲ್ಲಂಘನೆಯಾಗಿರುವುದನ್ನು ಗಮನಿಸಿದ ಆಯುಕ್ತರು ಗುತ್ತಿಗೆ ಸಂಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಯಮ ಉಲ್ಲಂಘಿಸಿದ 'ರಿವಾರ್ಡ್ಸ್' ಸಂಸ್ಥೆಗೆ ನೋಟಿಸ್ ಹಾಗೂ ದಂಡಕ್ಕೆ ಸೂಚನೆ
ಈ ಇಂದಿರಾ ಕ್ಯಾಂಟೀನ್‌ಗೆ "ರಿವಾರ್ಡ್ಸ್' ಸಂಸ್ಥೆಯಿಂದ ಆಹಾರ ಸರಬರಾಜು ಮಾಡಲಾಗುತ್ತಿದ್ದು, ಈ ಸಂಸ್ಥೆಯು ನಿಗದಿತ ಮೆನು ಪ್ರಕಾರದಲ್ಲಿ ಆಹಾರ ಪೂರೈಸದೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ನಿಯಮ ಉಲ್ಲಂಘಿಸಿರುವ ಸಂಸ್ಥೆಗೆ ತಕ್ಷಣ ನೋಟಿಸ್ ಜಾರಿಗೊಳಿಸಿ ಗರಿಷ್ಠ ದಂಡ ವಿಧಿಸುವಂತೆ ಸೂಚಿಸಿದರು. ಕೊರತೆಯಾಗಿರುವ ಆಹಾರದ ಪ್ರಮಾಣಕ್ಕೆ ತಕ್ಕಂತೆ ಬಿಲ್‌ನಲ್ಲಿ ಮೊತ್ತ ಕಡಿತಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದೂರುಗಳ ಕಡೆಗಣಿಸಿದ್ದ ಸಿಬ್ಬಂದಿಗೆ ಆಯುಕ್ತರಿಂದ ಎಚ್ಚರಿಕೆ
ಇಂದಿರಾ ಕ್ಯಾಂಟೀನ್ ಗೆ ಊಟಕ್ಕೆ ಬರುವ ಸಾರ್ವಜನಿಕರು ಆಹಾರದ ಗುಣಮಟ್ಟ ಮತ್ತು ಶುಚಿತ್ವದ ಕೊರತೆ ಕುರಿತು ದೂರುಗಳನ್ನು ಪುಸ್ತಕದಲ್ಲಿ ದಾಖಲಿಸಿರುವುದನ್ನು ಪರಿಶೀಲಿಸಿದರು. ಆಹಾರದ ಗುಣಮಟ್ಟ ಕುರಿತು ದೂರುಗಳಿದ್ದರೂ ಮೇಲಧಿಕಾರಿಗಳಿಗೆ ಲಿಖಿತವಾಗಿ ವರದಿ ನೀಡಿ ಕ್ರಮ ಕೈಗೊಳ್ಳದೆ, ಕೇವಲ ಮೊಬೈಲ್ ಸಂದೇಶ ಕಳುಹಿಸಿದ್ದ ಕ್ಯಾಂಟೀನ್ ಮೇಲ್ವಿಚಾರಕರ ಬೇಜವಾಬ್ದಾರಿಗೆ ಆಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಸಾರ್ವಜನಿಕರ ದೂರುಗಳ ಸಂಬಂಧ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ, ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಮುಂದುವರಿದು, ಬಡವರು ಹಾಗೂ ಆಸ್ಪತ್ರೆಯ ರೋಗಿಗಳ ಅನುಕೂಲಕ್ಕಾಗಿ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ನೀಡುವ ಸರ್ಕಾರದ ಆಶಯಕ್ಕೆ ಯಾವುದೇ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ನೀಡಿದ್ದಾರೆ.
ಚರಂಡಿ ಚೇಂಬರ್ ತಕ್ಷಣ ಸರಿಪಡಿಸಲು ಎಂಜಿನಿಯರ್‌ಗೆ ಸೂಚನೆ
ಕ್ಯಾಂಟೀನ್ ಆವರಣದಲ್ಲಿ ಒಳಚರಂಡಿ ನೀರು ಉಕ್ಕಿ ಹರಿಯುತ್ತಿರುವುದನ್ನು ಗಮನಿಸಿದ ಆಯುಕ್ತರು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಂಬಂಧಪಟ್ಟ ಎಂಜಿನಿಯರ್‌ಗೆ ಕರೆ ಮಾಡಿ ಕೂಡಲೇ ಚರಂಡಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು, ಆರೋಗ್ಯ ವಿಭಾಗದ ಸಿಬ್ಬಂದಿ ಹಾಗೂ ಕ್ಯಾಂಟೀನ್ ಮೇಲ್ವಿಚಾರಕರು ಸೇರಿದಂತೆ ಹಲವರು ಇದ್ದರು.


Click it and Unblock the Notifications
