ಇಂದಿರಾ ಕ್ಯಾಂಟೀನ್: ಸ್ವಚ್ಚತೆಗೆ, ಗುಣಮಟ್ಟಕ್ಕಾಗಿ ಬಿಬಿಎಂಪಿ ಅಧಿಕಾರಿ ನೇಮಕ, ಸಹಾಯವಾಣಿ ಆರಂಭ
ಬೆಂಗಳೂರು, ಜುಲೈ 11: ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ಮತ್ತು ಸಿಎಂ ಸಿದ್ದರಾಮಯ್ಯನವರ ಕನಸಿನ ಕೂಸಾದ 'ಇಂದಿರಾ ಕ್ಯಾಂಟಿನ್' ನಲ್ಲಿನ ಆಹಾರಗಳಿಗೆ ಹೆಚ್ಚಿನ ಹಣ ಪಡೆಯಲಾಗುತ್ತದೆ ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ಜನರಿಗೆ ಹೊರೆಯಾಗದಂತೆ ತಡೆಯಲು ಮತ್ತು ಉತ್ತಮ ವ್ಯವಸ್ಥೆ ನೀಡಲು, ಹೊಸದಾಗಿ ಸಹಾಯವಾಣಿ ಆರಂಭಿಸಲು ಬಿಬಿಎಂಪಿ ಮುಂದಾಗಿದೆ.
ನಿತ್ಯ ಸಾವಿರಾರು ಮಂದಿ ಬಡವರ ಹೊಟ್ಟೆ ತುಂಬಿಸುವ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಇತ್ತಿಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದರು ಈ ವೇಳೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ತಿಂಡಿಗೆ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಗೊತ್ತಾಗಿದೆ. ಇದನ್ನು ಪರೀಶಿಲಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದರು.

ಈಗಾಗಲೇ ಇಂದಿರಾ ಕ್ಯಾಂಟೀನ್ ಅಭಿವೃದ್ಧಿಗಾಗಿ ಇತ್ತಿಚೆಗೆ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಊಟ, ತಿಂಡಿಗೆ ಹೆಚ್ಚಿನ ಹಣ ಪಡೆಯುತ್ತಿರುವುದನ್ನು ಸರಿಪಡಿಸಲು ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ ಆಹಾರ ಗುಣಮಟ್ಟ ಕಾಯ್ದುಕೊಳ್ಳಲು, ಸ್ವಚ್ಚತೆ, ನೀರಿನ ವ್ಯವಸ್ಥೆ ನಿರ್ವಹಣೆ ಸೇರಿದಂತೆ ಒಟ್ಟಾರೆ ಇಂದಿರಾ ಕ್ಯಾಂಟಿನ್‌ಗೆ ಬಿಬಿಎಂಪಿ ಅಧಿಕಾರಿ ನೇಮಕ ಮಾಡಲು ಯೋಜಿಸಿದೆ.
ಬಿಬಿಎಂಪಿ ಅಧಿಕಾರಿಗಳು ಕ್ಯಾಂಟೀನ್‌ನಲ್ಲಿ ಆಹಾರ ಪದಾರ್ಥಗಳಿಗೆ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ನೇಮಕಗೊಳ್ಳಲಿರುವ ಅಧಿಕಾರಿಗಳು ಆಹಾರದ ಗುಣಮಟ್ಟದ ಬಗ್ಗೆ ಸದಾ ನಿಗಾ ಇಡಲಿದ್ದಾರೆ. ಯಶಸ್ವಿಯಾಗಿ ಕ್ಯಾಂಟೀನ್ ನಿರ್ವಹಿಸುವಲ್ಲಿ ಈ ಅಧಿಕಾರಿಗಳು ಮಹತ್ವದ ಪಾತ್ರ ವಹಿಸಲಿದ್ದಾರೆ. ಅಧಿಕಾರ ನೇಮಕ ಜೊತೆಗೆ ಬಿಬಿಎಂಪಿ ಹೊಸ ಸಹಾಯವಾಣಿ ಆರಂಭ ಮಾಡಲು ನಿರ್ಧರಿಸಿದೆ.
ಏನಿದು ಇಂದಿರಾ ಕ್ಯಾಂಟೀನ್ ಸಹಾಯವಾಣಿ?
ಬಿಬಿಎಂಪಿ ರೂಪಿಸಿರುವ 1533 ಸಹಾಯವಾಣಿ ಮೂಲಕ ಜನರಿಗೆ ಸೇವೆ ನೀಡಲು ಹೊಸ ಸಹಾಯವಾಣಿ ರೂಪಿಸಲಾಗಿದೆ. ಈ ಸಹಾಯವಾಣಿಯನ್ನು ಎಲ್ಲ ಇಂದಿರಾ ಕ್ಯಾಂಟೀನ್‌ಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ ಇಂದಿರಾ ಕ್ಯಾಂಟಿನ್ ಬಳಿ, ರಸ್ತೆ ಪಕ್ಕ ಎಲ್ಲೆಂದರಲ್ಲಿ ಕಸ ಸುರಿಯುವುದನ್ನ ತಡೆಯಲು ಬಿಬಿಎಂಪಿ ಚಿಂತನೆ ನಡೆಸಿದೆ.

ಈ ಹಿಂದೆ ಇದ್ದಂತೆ ಕಸ ಸುರಿಯುವವರ ಮೇಲೆ ನಿಗಾ ಇಡಲು ಮಾರ್ಷಲ್ ಗಳನ್ನು ಮತ್ತು ಅಧಿಕಾರಿಗಳ ತಂಡ ರಚನೆ ಮಾಡಿದೆ. ರಸ್ತೆ ಬದಿ ಕಸ ಹಾಕುವವರ ಮೇಲೆ ನಿಗಾ, ಬ್ಲಾಕ್ ಸ್ಪಾಟ್, ರಸ್ತೆ ಗುಂಡಿ ಮೇಲೂ ಈ ತಂಡ ನಿಗಾ ವಹಿಸಲಿದೆ. ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಬಿಬಿಎಂಪಿ ಕಾಂಪ್ಯಾಕ್ಟರ್ಗಳ ಮೇಲೆ ಮಾರ್ಷಲ್‌ಗಳು ಕಣ್ಣಿಡಲಿದ್ದಾರೆ. ಇದೆಲ್ಲವು ಮೊದಲಿಗೆ ಆರಂಭಿಕ ಹಂತದಲ್ಲಿ ಒಂದು ವಲಯದಲ್ಲಿ ಜಾರಿಗೆ ತರಲು ಬಿಬಿಎಂಪಿ ಚಿಂತನೆ ನಡೆಸಿದೆ.












Click it and Unblock the Notifications