Bengaluru: ನೀರಿನ ಗುಣಮಟ್ಟ ಖಾತ್ರಿಗೆ ರಾಷ್ಟ್ರಮಟ್ಟದಲ್ಲಿ ಏಕೀಕೃತ ನೀತಿ ಅಳವಡಿಕೆಗೆ ಚಿಂತನೆ: BWSSB
ಬೆಂಗಳೂರು, ನವೆಂಬರ್ 06: ಸಂಸ್ಕರಿಸಿದ ನೀರಿನ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಖಚಿತ ಪಡಿಸಲು ಭಾರತವು ಏಕೀಕೃತ ರಾಷ್ಟ್ರೀಯ ಮಾನದಂಡದ ಅವಶ್ಯಕತೆ ಇದೆ. ಇದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಏಕೀಕೃತ ನೀತಿಯನ್ನು ರೂಪಿಸುವ ನಿಟ್ಟಿಲ್ಲಿ ಚಿಂತನೆ ನಡೆಸಲಾಗುತ್ತಿದೆ ನೀತಿ ಆಯೋಗದ ಸದಸ್ಯರಾದ ಡಾ. ವಿನೋದ್ ಕೆ. ಪಾಲ್ ಹೇಳಿದರು.
ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಸಹಯೋಗದಲ್ಲಿ ನೀತಿ ಆಯೋಗ ಆಯೋಜಿಸಿದ್ದ ʻಭಾರತದಲ್ಲಿ ಸಂಸ್ಕರಿಸಿದ ನೀರಿನ ಪುನರ್ ಬಳಕೆʼ ಕುರಿತು ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದ ತಲಾ ನೀರಿನ ಲಭ್ಯತೆ ಈಗಾಗಲೇ 1,400 ಘನ ಮೀಟರ್‌ಗಳಿಗಿಂತ ಕಡಿಮೆಯಾಗಿದೆ. 2030ರೊಳಗೆ ಶೇಕಡ 50 ಪುನರ್‌ಬಳಕೆ ಮತ್ತು 2045ರೊಳಗೆ ಶೇಕಡ 100 ಪುನರ್‌ಬಳಕೆಯನ್ನು ಮಾಡುವ ನಿಟ್ಟಿನಲ್ಲಿ ದೇಶವು ನಿರ್ಣಾಯಕ ಹೆಜ್ಜೆ ಇಡಬೇಕು ಎಂದು ಎಚ್ಚರಿಸಿದರು. ಪ್ರಸ್ತುತ ಕೇವಲ 11 ರಾಜ್ಯಗಳಿಗೆ ಮಾತ್ರ ಸಂಸ್ಕರಿಸಿದ ನೀರಿನ ಪುನರ್‌ಬಳಕೆ ನೀತಿ ಇದೆ ಎಂದರು.
ಗಂಗಾ ನದಿಯನ್ನು ಪುನಶ್ಚೇತನ 2045ಕ್ಕೆ ಪೂರ್ಣ
ನೀರು ಜೀವನದ ಒಂದು ಭಾಗವಷ್ಟೇ ಅಲ್ಲ. ನೀರಿದ್ದರೆ ಮಾತ್ರವೇ ಜೀವನ ಎಂಬುದನ್ನು ಅರಿತುಕೊಳ್ಳಬೇಕಿದೆ. ನೀರು ಒಂದು ಸಂಪನ್ಮೂಲ ಕೂಡ ಹೌದು. ಸಂಸ್ಕರಿಸಿದ ನೀರಿನ ಬಳಕೆ ಬಗ್ಗೆ ಇರುವ ಮೂಢನಂಬಿಕೆಯನ್ನು ನಾವು ಬಿಡಬೇಕು. ಅಂತರ್ಜಲ ಮಟ್ಟ ಕುಸಿಯುತ್ತಿದೆ. ನದಿಗಳಲ್ಲೂ ನೀರಿನ ಹರಿವು ಕಡಿಮೆಯಾಗುತ್ತಿದೆ. ಗಂಗಾ ನದಿಯನ್ನು ಪುನಶ್ಚೇತನ ನಡೆಸುವ ಕಾರ್ಯ ಪ್ರಗತಿಯಲ್ಲಿದೆ. 2045ರ ವೇಳೆಗೆ ಶೇ.100 ಮುಗಿಯಲಿದೆ. ಕೃಷಿ ಕೆಲಸಕ್ಕೆ ಸಂಸ್ಕರಿಸಿದ ನೀರಿನ ಬಳಕೆ ಮಾಡುವುದಕ್ಕೆ ಉತ್ತೇಜನ ನೀಡಬೇಕು. ಇದೇ ವೇಳೆ ಶುದ್ಧೀಕರಿಸಿದ ಸಂಸ್ಕರಿಸಿದ ನೀರಿನ ಬಳಕೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಾನದಂಡ ರೂಪಿಸುವ ಅವಶ್ಯಕತೆಯಿದೆ. ಈ ಬಗ್ಗೆ ಈಗಾಗಲೇ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
110 ಕೆರೆಗಳ ಪುನರುಜ್ಜೀವನ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, 2024 ನೇ ಸಾಲಿನಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಭದ್ರತೆಯನ್ನು ಕಾಯ್ದುಕೊಳ್ಳಲು ಸಂಸ್ಕರಿಸಿದ ನೀರಿನ್ನು ಕುಡಿಯುವುದಕ್ಕೆ ಹೊರತಾಗಿ ಇತರೆ ಕಾರ್ಯಾಕ್ಕೆ ಬಳಕೆ ಮಾಡಲು ಸೂಚಿಸಲಾಗಿತ್ತು. ನಗರದ 110 ಕೆರೆಗಳ ಪುನರುಜ್ಜೀವನಗೊಳಿಸಲಾಯಿತು. 2028ರೊಳಗೆ ಶೇ.100 ಸಂಸ್ಕರಿಸಿದ ಬಳಕೆ ಮತ್ತು ಮಳೆನೀರು ಸಂಗ್ರಹಣೆಗೆ ಒತ್ತು ನೀಡಲಾಗಿದೆ. ಸಂಸ್ಕರಿಸಿದ ನೀರಿನ ಪುನರ್‌ಬಳಕೆಗೆ ಸರಿಹೊಂದುವ ನಿಯಮ ಜಾರಿಗೆ ತರಲಾಗುವುದು ಎಂದು ಹೇಳಿದರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರು ಪ್ರತಿದಿನ 2,225 ಎಂಎಲ್‌ಡಿ ನೀರನ್ನು ಪೂರೈಸುತ್ತಿದೆ ಮತ್ತು ಜತೆಗೆ ಪ್ರತಿ ನಿತ್ಯ 34 ಒಳಚರಂಡಿ ಸಂಸ್ಕರಿಸುವ ಘಟಕ(ಎಸ್‌ಟಿಪಿ)ದ ಮೂಲಕ 1,350 ಎಂಎಲ್‌ಡಿ ಸಂಸ್ಕರಿಸಲಾಗುತ್ತಿದೆ. ಮತ್ತಷ್ಟು ನೀರಿನ ಸಂಸ್ಕರಿಸುವ ಗುರಿ ಹೊಂದಿದ್ದೇವೆ. ಇದಕ್ಕಾಗಿ 12 ಎಸ್‌ಟಿಪಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜನರಲ್ಲಿ ಸಂಸ್ಕರಿಸಿದ ನೀರಿನ ಬಗ್ಗೆ ಭರವಸೆ ಮೂಡಿಸಲು ಎಸ್‌ಟಿಪಿಗಳನ್ನು ಸಂಪನ್ಮೂಲಕ ಚೇತರಿಕೆ ಘಟಕ ಎಂದು ಬ್ರಾಂಡಿಂಗ್ ಮಾಡಬೇಕಿದೆ ಎಂದರು.
ನಾಳೆ ಅಧಿಕಾರಿಗಳ ಕೆಲಸವೇನು?
ಕಾರ್ಯಾಗಾರದ ಆರಂಭದಲ್ಲಿ 'ಬಿಡಬ್ಲುಎಸ್‌ಎಸ್‌ಬಿ: ದೃಷ್ಟಿ ಮತ್ತು ಸೇವೆಯ ಪರಂಪರೆ' ಮತ್ತು "ಬೆಂಗಳೂರಿನಲ್ಲಿ ನೀರಿನ ಪುನರ್‌ಬಳಕೆಯ ಒಂದು ಝಲಕ್' ಎಂಬ ಎರಡು ಸಾಕ್ಷಚಿತ್ರಗಳನ್ನು ಪ್ರದರ್ಶಿಸಲಾಯಿತು. ಪ್ರತಿನಿಧಿಗಳು ಕಾರ್ಯಾಗಾರದ ಭಾಗವಾಗಿ ನಾಳೆ (ನವೆಂಬರ್ 7 ರಂದು) ಕಬ್ಬನ್ ಪಾರ್ಕ್ ತೃತೀಯ ಶುದ್ಧೀಕರಣ ಘಟಕ ಮತ್ತು ಕೆಸಿ ವ್ಯಾಲಿ ಯೋಜನೆಗೆ ಭೇಟಿ ನೀಡಿ, ಬೆಂಗಳೂರಿನ ವಿಶಾಲ ಪ್ರಮಾಣದ ಸಂಸ್ಕರಿಸಿ ನೀರಿನ ಪುನರ್‌ಬಳಕೆ ಮತ್ತು ಪರಿಸರ ಪುನರುಜ್ಜೀವನದ ಪ್ರಯತ್ನಗಳನ್ನು ವೀಕ್ಷಿಸಲಿದ್ದಾರೆ.












Click it and Unblock the Notifications