ಯಶ್ ಅವರ ಆಡಿಟರ್ ಬಸವರಾಜ್ ಕಚೇರಿ ಮೇಲೆ ಐಟಿ ದಾಳಿ
Recommended Video

ಬೆಂಗಳೂರು, ಜನವರಿ 11: ನಟ ಯಶ್ ಅವರ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಐಟಿ ಇಲಾಖೆ ಅಧಿಕಾರಿಗಳು, ಗುರುವಾರ ರಾತ್ರಿ ವೇಳೆ ಮತ್ತೆ ದಾಳಿ ಮುಂದುವರೆಸಿದ್ದಾರೆ. ಯಶ್ ಅವರ ಅಡಿಟರ್ ಬಸವರಾಜ್ ಅವರ ಕಚೇರಿ ಮೇಲೆ ಪರಿಶೀಲನೆ ನಡೆಸಲಾಗಿದೆ.
ಐದು ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿದ್ದ ತಂಡವೊಂದು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಬಸವರಾಜ್ ಅವರ ಕಚೇರಿಗೆ ಗುರುವಾರ ಸಂಜೆ ವೇಳೆ ಭೇಟಿ ನೀಡಿದರು. ಈ ವೇಳೆಯಲ್ಲಿ ಬಸವರಾಜ್ ಅವರು ಕಚೇರಿಯಲ್ಲೇ ಇದ್ದರು ಎಂದು ತಿಳಿದು ಬಂದಿದೆ.
ಯಶ್ ಸೇರಿದಂತೆ ಹಲವು ನಟ, ನಿರ್ಮಾಪಕರಿಗೆ ಆಡಿಟರ್ ಆಗಿರುವ ಬಸವರಾಜ್ ಅವರ ಕಚೇರಿಯಲ್ಲಿ ಯಶ್ ಅವರಿಗೆ ಸಂಬಂಧಿಸಿದ ಆಸ್ತಿ ದಾಖಲೆ, ಬ್ಯಾಂಕ್ ಖಾತೆಯ ವಿವರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ತಡರಾತ್ರಿವರೆಗೂ ದಾಖಲೆಗಳ ಪರಿಶೀಲನೆ ಮುಂದುವರೆದಿದ್ದು, ಇಬ್ಬರು ಅಧಿಕಾರಿಗಳು ಕಚೇರಿಯಿಂದ ಮುರ್ನಾಲ್ಕು ಬ್ಯಾಗ್ ಗಳೊಂದಿಗೆ ಹೊರಕ್ಕೆ ಹೋಗಿದ್ದು ಬಿಟ್ಟರೆ, ಹೆಚ್ಚಿನ ಬೆಳವಣಿಗೆ ಕಂಡು ಬಂದಿಲ್ಲ. ಯಶ್ ಅವರು ಆದಾಯ ತೆರಿಗೆ ಕಚೇರಿಗೆ ತೆರಳಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ಇದಕ್ಕೂ ಮುನ್ನ ಈ ದಾಳಿ ನಡೆದಿರುವುದು ಕುತೂಹಲ ಮೂಡಿಸಿದೆ.
ಇತ್ತೀಚೆಗಷ್ಟೇ ನಟರಾದ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ ಹಾಗೂ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವಿಜಯ ಕಿರಗಂದೂರು, ಜಯಣ್ಣ, ಸಿ.ಆರ್. ಮನೋಹರ್ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಸುಮಾರು 109ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿತ್ತು. ಇದಾದ ಬಳಿಕ ನಟ ಪುನೀತ್, ರಾಕ್ ಲೈನ್ ವೆಂಕಟೇಶ್, ಶಿವರಾಜ್ ಕುಮಾರ್ ಅವರು ಐಟಿ ಕಚೇರಿಗೆ ಭೇಟಿ ನೀಡಿದ್ದರು.












Click it and Unblock the Notifications