ಬೆಂಗಳೂರು; ಐಟಿ ದಾಳಿಯ ವಿವರಗಳು, ಸಿಕ್ಕಿದ ಹಣ, ಆಸ್ತಿ ಮಾಹಿತಿ
ಬೆಂಗಳೂರು, ಅಕ್ಟೋಬರ್ 12; ಬೆಂಗಳೂರು ನಗರದಲ್ಲಿ ನಡೆದ ದಾಳಿ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ನೀರಾವರಿ ಮತ್ತು ಹೆದ್ದಾರಿ ಯೋಜನೆಗಳ ಕಾಮಗಾರಿಗಳಲ್ಲಿ ತೊಡಗಿರುವ ಬೆಂಗಳೂರು ಮೂಲದ ಮೂವರು ಪ್ರಮುಖ ಗುತ್ತಿಗೆದಾರರ ವಿರುದ್ಧ ಶೋಧ ಮತ್ತು ಪತ್ತೆ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಲಾಗಿದೆ.
Recommended Video
2021ರ ಅಕ್ಟೋಬರ್ 7ರಂದು ಆರಂಭವಾದ ಈ ಕಾರ್ಯಾಚರಣೆ ನಾಲ್ಕು ರಾಜ್ಯಗಳಾದ್ಯಂತ 47 ಕಡೆ ನಡೆದಿದೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಮಂಗಳವಾರ ಆದಾಯ ತೆರಿಗೆ ಇಲಾಖೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಈ ಶೋಧ ಕಾರ್ಯದ ವೇಳೆ ಈ ಮೂರು ಸಂಸ್ಥೆಗಳು ನಕಲಿ ಖರೀದಿದಾದರರನ್ನು ಆಶ್ರಯಿಸುವ ಮೂಲಕ ತಮ್ಮ ಆದಾಯವನ್ನು ಮುಚ್ಚಿಟ್ಟಿರುವುದು, ಕಾರ್ಮಿಕ ವೆಚ್ಚಗಳ ಹಣದುಬ್ಬರ, ಬೋಗಸ್ ಉಪ-ಗುತ್ತಿಗೆಗಳ ವೆಚ್ಚ ಬುಕಿಂಗ್ ಇತ್ಯಾದಿಗಳಲ್ಲಿ ತೊಡಗಿರುವುದು ಕಂಡು ಬಂದಿದೆ ಎಂದು ಇಲಾಖೆ ಹೇಳಿದೆ.

ನಿರ್ಮಾಣ ವ್ಯವಹಾರಗಳಿಗೆ ಸಂಬಂಧವಿಲ್ಲದ ಸುಮಾರು 40 ವ್ಯಕ್ತಿಗಳ ಹೆಸರಿನಲ್ಲಿ ಒಂದು ಬಳಗ, ನಕಲಿ ಉಪ ಗುತ್ತಿಗೆ ವೆಚ್ಚಗಳನ್ನು ಬುಕ್ ಮಾಡಿರುವುದು ತನಿಖೆಯ ವೇಳೆ ಹೊರಬಿದ್ದಿದೆ. ತನಿಖೆಯ ವೇಳೆ ಈ ವ್ಯಕ್ತಿಗಳು ತಾವು ಅವ್ಯವಹಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಇನ್ನೊಂದು ಬಳಗ ಸುಮಾರು 382 ಕೋಟಿ ರೂ.ಗಳಷ್ಟು ಕಾರ್ಮಿಕ ವೆಚ್ಚಗಳ ಹಣದುಬ್ಬರವನ್ನು ಪಡೆದಿರುವುದಾಗಿ ಒಪ್ಪಿಕೊಂಡಿದೆ. ಅಲ್ಲದೆ ಮತ್ತೊಂದು ಬಳಗ ಅಸ್ಥಿತ್ವದಲ್ಲೇ ಇಲ್ಲದ ಪೇಪರ್ ಕಂಪನಿಗಳಿಂದ ಸುಮಾರು 105 ಕೋಟಿ ಗಳವರೆಗೆ ವಸತಿ ಪ್ರವೇಶಗಳನ್ನು ಪಡೆದಿದೆ ಮತ್ತು ಆ ಅಂಶವನ್ನು ಆ ಬಳಗ ಒಪ್ಪಿಕೊಂಡಿದೆ.
ಭೌತಿಕ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು ಸೇರಿ ಇತ್ಯಾದಿಗಳ ರೂಪದಲ್ಲಿ ವಿವಿಧ ದೋಷಾರೋಪಣ ಸಾಕ್ಷ್ಯಗಳು ಪತ್ತೆಯಾಗಿವೆ ಮತ್ತು ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಶೋಧ ಕಾರ್ಯದ ವೇಳೆ ಲೆಕ್ಕವಿಲ್ಲದ 4.96 ಕೋಟಿ ರೂ. ನಗದು, ಲೆಕ್ಕವಿಲ್ಲದ 8.67 ಕೋಟಿ ರೂ.ಮೌಲ್ಯದ ಆಭರಣ ಮತ್ತು ಬುಲಿಯನ್, 29.83 ಕೋಟಿ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಈ ಮೂರು ಸಂಸ್ಥೆಗಳ ಪತ್ತೆ ಮತ್ತು ಶೋಧ ಕಾರ್ಯದಿಂದ ಸುಮಾರು 750 ಕೋಟಿ ರೂ. ಮೌಲ್ಯದ ಘೋಷಿಸಲಾಗದ ಆದಾಯ ಪತ್ತೆಯಾಗಿದೆ. ಆ ಪೈಕಿ ಒಟ್ಟು 487 ಕೋಟಿ ರೂ. ಬಹಿರಂಗಪಡಿಸದ ಆದಾಯವೆಂದು ಸ್ವತಃ ಆಯಾ ಸಮೂಹ ಸಂಸ್ಥೆಗಳೇ ಒಪ್ಪಿಕೊಂಡಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಐಟಿ ದಾಳಿ; ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕುಟುಂಬಕ್ಕೆ ಆಪ್ತರಾಗಿದ್ದ ಬಿಎಂಟಿಸಿ ಚಾಲಕ ಆಯನೂರು ಉಮೇಶ್ ಮನೆ, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಬಿಜೆಪಿ ರಾಜ್ಯಾ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಸಹಪಾಠಿ ಅರವಿಂದ್ ಸ್ವಾಮಿ ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಒಟ್ಟು 4 ರಾಜ್ಯದ 47 ಸ್ಥಳಗಳಲ್ಲಿ ಮೂರು ದಿನ ಶೋಧ ನಡೆದಿತ್ತು.
ಗುತ್ತಿಗೆದಾರರಾದ ಡಿ. ವೈ. ಉಪ್ಪಾರ್, ಸ್ಟಾರ್ ಚಂಂದ್ರು, ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್, ಅಮೃತ್ ಕನ್‌ಸ್ಟ್ರಕ್ಷನ್‌ನ ಎಂ. ಸಿ. ರಾವ್, ಶ್ರೀನಿವಾಸ್, ಬಸವೇಶ್ವರ ನಗರ ನಗರದ ಸೋಮಶೇಖರ್, ಕಬ್ಬಿಣ ಮತ್ತು ಸಿಮೆಂಟ್ ಪೂರೈಸುವ ಸಹಕಾರ ನಗರದ ರಾಹುಲ್ ಎಂಟರ್ ಪ್ರೈಸಸ್ ವಿವಿಧ ಕಡೆ ದಾಳಿಯಾಗಿತ್ತು.
ಮಂಗಳವಾರ ಸಹ ಬೆಂಗಳೂರು ನಗರದಲ್ಲಿ ಐಟಿ ದಾಳಿ ಮುಂದುವರೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳಿಗೆ ಚುನಾವಣಾ ಪ್ರಚಾರ, ಸಾಮಾಜಿಕ ಜಾಲತಾಣ ನಿರ್ವಹಣೆ ಸೇವೆ ನೀಡುವ ಡಿಸೈನ್ ಬಾಕ್ಸ್ಡ್ ಎಂಬ ಕಂಪನಿ ಮೇಲೆ ದಾಳಿ ನಡೆಸಲಾಗಿದೆ.












Click it and Unblock the Notifications