IBPS ಪರೀಕ್ಷೆ ಕನ್ನಡದಲ್ಲಿ ಇಲ್ಲವೇಕೆ?: ಹಿಂದಿ ಹೇರಿಕೆ ವಿರುದ್ಧ ಎಎಪಿ ಕರೆ:
ಬೆಂಗಳೂರು, ಆಗಸ್ಟ್ 21: ಕೇಂದ್ರ ಸರ್ಕಾರದಡಿ ಬರುವ IBPS (ಇನ್ಸ್ಟಿಟ್ಯೂಟ್ ಫಾರ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್) ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ನಡೆಸುತ್ತಿರುವುದು ಏಕೆ?. ಹೀಗೆ ಮಾಡುವುದರಿಂದ ಕನ್ನಡ ಹಾಗೂ ಇತರೇ ಭಾಷಿಗರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಡಾ.ರಮೇಶ್ ಬೆಲ್ಲಂಕೊಂಡ ಕಿಡಿ ಕಾರಿದರು.
ರಾಷ್ಟ್ರೀಯ ಪರೀಕ್ಷೆಯಲ್ಲಿ ಹಿಂದಿಯೇತರ ಭಾಷೆಗಳ ಕಡೆಗಣನೆಗೆ ಸಂಬಂಧಿಸಿದಂತೆ ಸೋಮವಾರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಹಿಂದಿ ಮಾತೃಭಾಷಿಗರು ಹಿಂದಿಯಲ್ಲೇ ಪರೀಕ್ಷೆ ತೆಗೆದುಕೊಳ್ಳಬಹುದು. ಆದರೆ ಕನ್ನಡಿಗರು ಹಾಗೂ ದೇಶದ ಇನ್ನಿತರ ಮಾತೃ ಭಾಷಿಗರಿಗೂ ಅವರದೇ ಭಾಷೆಯ ಆಯ್ಕೆ ಏಕಿಲ್ಲ?. ತಮ್ಮ ಮಾತೃಭಾಷೆಯನ್ನು ಬಿಟ್ಟು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಅನಿವಾರ್ಯ ವಾತವರಣವಿದೆ ಏಕೆ? ಎಂದು ಪ್ರಶ್ನಿಸಿದರು.

ಹಿಂದಿ ಹೇರಿಕೆಯಾಗಿದೆ ಹಾಗೂ ಹಿಂದಿಯೇತರರನ್ನು 2ನೇ ದರ್ಜೆ ಭಾರತೀಯರನ್ನಾಗಿ ಪರಿಗಣಿಸುವ ಕುತಂತ್ರ ಇದಾಗಿದೆ. ಅಂದಾಜು ಏಳು ಕೋಟಿ ಕನ್ನಡಿಗರು ಕರ್ನಾಟಕದಲ್ಲಿ ಮತ್ತು ಅಂದಾಜು 82 ಕೋಟಿ ಹಿಂದಿಯೇತರರು ಭಾರತದಲ್ಲಿದ್ದಾರೆ. ಈ ಕಾರ್ಯವು ಇವರನ್ನು ಗುಲಾಮಗಿರಿಗೆ ತಳ್ಳುವ ಪ್ರಯತ್ನವಲ್ಲವೇ? ಎಂದು ಹೇಳಿದರು.
ಸಂಸ್ಕೃತಕ್ಕೂ ಬ್ಯಾಂಕ್ ಸೇವೆ ಏನು ಸಂಬಂಧ
ಸಂಸ್ಕೃತಕ್ಕೂ ಬ್ಯಾಂಕ್ ಸೇವೆಗಳಿಗೂ ಏನು ಸಂಬಂಧ? ಬ್ಯಾಂಕುಗಳಲ್ಲಿ ಕನ್ನಡಕ್ಕೆ ಅವಕಾಶ ಇಲ್ಲ, ಸಂಸ್ಕೃತಕ್ಕೆ ಇದೆ ಎನ್ನುವುದಾದರೆ, ಇದು ವಿಪರ್ಯಾಸವಲ್ಲವೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕುಗಳಲ್ಲಿ ಈ ಭಾಷಾ ನೀತಿಯ ಅನ್ಯಾಯವನ್ನು ತಡೆಯಲು ಮತ್ತು ಈಗಾಗಲೇ ಆಗಿರುವ ಅನ್ಯಾಯಕ್ಕೆ ಪರಿಹಾರ ಒದಗಿಸಲು ನಾವೆಲ್ಲರೂ ಕೈ ಜೋಡಿಸೋಣ. ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಮತ್ತು ಬಿಜೆಪಿಯ ಎಲ್ಲಾ ಬೆಂಬಲಿಗರಿಗೆ ನಮ್ಮ ಸಂದೇಶ ಇದಾಗಿದೆ ದಯವಿಟ್ಟು ಎಚ್ಚರಗೊಳ್ಳಿ ಎಂದು ಅವರು ಕರ್ನಾಟಕದಲ್ಲಿ ಬೇರೆಡೆ ಇರುವ ಕನ್ನಡಿಗರಲ್ಲಿ ಅವರು ಮನವಿ ಮಾಡಿದರು.
ಅವರು ನಿಮಗೆ ಏನು ಮಾಡುತ್ತಿದ್ದಾರೆಂದು ಅರ್ಥ ಮಾಡಿಕೊಳ್ಳಿ. ನಿಮ್ಮದೇ ಗುಲಾಮಗಿರಿಗೆ ನೀವು ವೋಟು ಹಾಕಬೇಡಿ. ನಮ್ಮೊಡನೆ ಕೈ ಜೋಡಿಸಿ. ನಾವೆಲ್ಲರೂ ಬಟ್ಟಾಗಿ ಬದಲಾವಣೆ ತರೋಣ ಎಂದು ರಮೇಶ್ ಬೆಳ್ಳಂಕೊಂಡ ಅವರು ರಾಜ್ಯದ ಜನತೆಗೆ ಕರೆ ನೀಡಿದರು.












Click it and Unblock the Notifications