Karnataka rain: ಅಕ್ಟೋಬರ್ 4ರವರೆಗೆ ರಾಜ್ಯಕ್ಕೆ ಮಳೆ ಸಾಧ್ಯತೆ, 16ಜಿಲ್ಲೆಗೆ 'ಯೆಲ್ಲೋ ಅಲರ್ಟ್'
ಬೆಂಗಳೂರು, ಸೆಪ್ಟಂಬರ್ 26: ತೀವ್ರ ಮಳೆ ಕೊರತೆ ಮತ್ತು ಬರಗಾಲಕ್ಕೆ ಸಾಕ್ಷಿಯಾಗಿರುವ ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆ ಸುರಿಯುವ ಲಕ್ಷಣಗಳು ಕಂಡು ಬಂದಿವೆ. ಇಂದಿನಿಂದ ಮುಂದಿನ ತಿಂಗಳ ಅಕ್ಟೋಬರ್ 04ರವರೆಗೆ ಮಳೆ ಆಗಲಿದೆ. ತಿಂಗಳಾಂತ್ಯಕ್ಕೆ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಸಾಧಾರಣ ಮಳೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಆಗಾಗ ಜಿಟಿ ಜಿಟಿ ಮಳೆ ಬಂದು ಹೋಗುತ್ತಿದೆ. ಇದರ ಹೊರತು ಎಲ್ಲಿಯೋ ಹೇಳಿಕೊಳ್ಳುವಂತಹ ಮಳೆ ದಾಖಲಾಗಿಲ್ಲ. ಆದರೆ ಸದ್ಯದ ಮುನ್ಸೂಚನೆ ನೋಡಿದರೆ ಮುಂದಿನ ಒಂದು ವಾರದಲ್ಲಿ ಎಲ್ಲೆಡೆ ಉತ್ತಮ ಮಳೆ ನಿರೀಕ್ಷೆ ಇದೆ.

ಮುಂದಿನ ಒಂದು ವಾರ ರಾಜ್ಯದಲ್ಲಿ ಚದುರಿದಂತೆ, ತುಂತುರುವಿನಿಂದ ಸಾಧಾರಣವಾಗಿ, ಆಗಾಗ ವ್ಯಾಪಕವಾಗಿ ಕೆಲವೆಡೆ ಜೋರಾಗಿ ಮಳೆ ಸುರಿಯಲಿದೆ. ಕರಾವಳಿ ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಿಗೆ ಭಾರೀ ಮಳೆ ಬರುವ ಸಂಭವವಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಅನೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಸೆಪ್ಟಂಬರ್ 27ರಂದು ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ಭಾರಿ ಮಳೆ ಬರಲಿರುವ ಪ್ರಯುಕ್ತ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಇತ್ತ ಸೆಪ್ಟಂಬರ್ 29ರಿಂದ ಅಕ್ಟೋಬರ್ 01ರವರೆಗೆ ಕರಾವಳಿ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹಾಗೂ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಕೊಡಗು, ಮಂಡ್ಯ ಮೈಸೂರು ಜಿಲ್ಲೆಗಳಿಗೆ ಎರಡು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ಕರಾವಳಿಯ ಮೂರು ಜಿಲ್ಲೆಗಳು ಶಿವಮೊಗ್ಗ, ಯಾದಗಿರಿ, ಕಲಬುರಗಿ, ಬೆಳಗಾವಿಯ ವಿವಿಧೆಡೆ ಮಳೆ ಆರ್ಭಟಿಲಿದೆ. ಗುಡುಗು ಮಿಂಚು ಕೆಲವೆಡೆ ಬಿರುಗಾಳಿ ಸಹಿತ ಮಳೆ ಅಬ್ಬರ ಕಂಡು ಬರಲಿದೆ.
ಕೆಲವೆಡೆ ಸೆಕೆಯ ವಾತಾವರಣ
ಬೆಂಗಳೂರು ನಗರ, ಹಾಸನ, ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಹಾವೇರಿ, ಚಿತ್ರದುರ್ಗ, ಬೆಳಗಾವಿ, ಗದಗ, ರಾಯಚೂರು, ಯಾದಗಿರಿ, ಬೀದರ್, ಉತ್ತರ ಕನ್ನಡ ಸೇರಿದಂತೆ ವಿವಿಧೆಡೆ ತಾಪಮಾನ ಇಳಿಕೆ ಆಗಿದೆ. ಆಗಾಗ ಮಳೆ ಬಂದು ಹೋಗುವುದರಿಂದ ಸೆಕೆಯ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ ಆಗುತ್ತಿದೆ. ಮೋಡ ಕವಿದ ವಾತಾವರಣವೇ ಕಂಡು ಬರುತ್ತಿದೆ. ಇದೇ ವಾತಾವರಣ ಇನ್ನೊಂದು ವಾರ ಮುಂದುವರಿಯಲಿದೆ.












Click it and Unblock the Notifications