ಐಎಂಎ ಹಗರಣ : ಬೆಂಗಳೂರಿನ ವಿವಿಧೆಡೆ ಎಸ್‌ಐಟಿ ದಾಳಿ
ಬೆಂಗಳೂರು, ಜುಲೈ 03 : ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಬೆಂಗಳೂರಿನ ವಿವಿಧ ಕಡೆ ದಾಳಿ ಮಾಡಿದೆ. 40 ಲಕ್ಷ ರೂ.ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ವಿಶೇಷ ಪೊಲೀಸ್ ತನಿಖಾ ತಂಡ (ಎಸ್‌ಐಟಿ) ಬುಧವಾರ ನೀಲಸಂದ್ರ ಮತ್ತು ವಿಜಯನಗರಗಳಲ್ಲಿರುವ ಐಎಂಎ ಸಮೂಹ ಸಂಸ್ಥೆಗಳ ಒಡೆತನದ ಫ್ರಂಟ್ ಲೈನ್ ಫಾರ್ಮಾ ಎಂಬ ಹೆಸರಿನ ಮತ್ತೆರಡು ಮಳಿಗೆಗಳ ಮೇಲೆ ದಾಳಿ ನಡೆಸಿದೆ.

ಅನಿಲ್ ಭೂಮಿ ರೆಡ್ಡಿ ನೇತೃತ್ವದ ತಂಡ ಶೋಧನಾ ಕಾರ್ಯ ನಡೆಸಿತು. ನೀಲಸಂದ್ರದಲ್ಲಿ ರೂ.60 ಸಾವಿರ ನಗದು, ಸೇರಿದಂತೆ ಒಟ್ಟು 40 ಲಕ್ಷ ರೂ. ಬೆಲೆಯ ಫಾರ್ಮಸಿ, ವಿದ್ಯನ್ಮಾನ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಎಚ್.ಎಸ್.ಆರ್.ಲೇಔಟ್‌ನಲ್ಲಿರುವ ಇದೇ ಹೆಸರಿನ ಮಳಿಗೆಯ ಮೇಲೆಯೂ ದಾಳಿ ನಡೆದಿದೆ. ಶೋಧನಾ ಕಾರ್ಯವು ಮುಂದುವರೆದಿದೆ. ಎಸ್‌ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.
ಆರೋಪಿ ಪೊಲೀಸ್ ವಶಕ್ಕೆ : ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಜುಲೈ 1ರಂದು ಬಂಧಿತರಾದ ಬಿಡಿಎ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ಡಿ. ಕುಮಾರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು 8 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.











Click it and Unblock the Notifications