ಐಎಂಎ ಹಗರಣ; ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್
ಬೆಂಗಳೂರು, ನವೆಂಬರ್ 10 : ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮೂವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ. ಈ ಪ್ರಕರಣದಲ್ಲಿ ಸಿಬಿಐ ದಾಖಲು ಮಾಡುತ್ತಿರುವ 3ನೇ ಎಫ್‌ಐಆರ್ ಇದಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಬಿ. ಎಂ. ವಿಜಯಶಂಕರ್, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್. ಸಿ. ನಾಗರಾಜ್ ಮತ್ತು ಗ್ರಾಮ ಲೆಕ್ಕಿಗ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿತ್ತು. ಐಎಂಎ ಕಂಪನಿ ನಿರ್ದೇಶಕರಿಂದ ಮೂವರು ಅಧಿಕಾರಿಗಳು ಲಂಚ ಪಡೆದು, ಕಂಪನಿ ಪರವಾಗಿ ವರದಿ ನೀಡಿದ್ದಾರೆ ಎಂಬುದು ಆರೋಪ.

ಬಿ. ಎಂ. ವಿಜಯಶಂಕರ್ 1.5 ಕೋಟಿ, ಎಲ್. ಸಿ. ನಾಗರಾಜ್ 4 ಕೋಟಿ ಮತ್ತು ಮಂಜುನಾಥ್ 8 ಲಕ್ಷ ಲಂಚ ಪಡೆದಿದ್ದಾರೆ. ಈ ಎಲ್ಲಾ ಲಂಚದ ವ್ಯವಹಾರಕ್ಕೆ ಮಂಜುನಾಥ್ ಮಧ್ಯವರ್ತಿಯಾಗಿದ್ದರು ಎಂದು ಸಿಬಿಐ ಹೇಳಿದೆ. ಅಧಿಕಾರಿಗಳ ಮನೆ ಮೇಲೆ ಈಗಾಗಲೇ ಸಿಬಿಐ ದಾಳಿಯೂ ನಡೆದಿತ್ತು.
ಐಎಂಎ ಹಗರಣದಲ್ಲಿ ಒಟ್ಟು 3 ಎಫ್‌ಐಆರ್‌ಗಳನ್ನು ಸಿಬಿಐ ದಾಖಲು ಮಾಡಿದ್ದು, 1000 ಪುಟದ ಜಾರ್ಜ್ ಶೀಟ್ ಸಹ ದಾಖಲಿಸಿದೆ. ಮೊದಲು ಎಸ್‌ಐಟಿ ಈ ಪ್ರಕರಣದ ತನಿಖೆ ಕೈಗೊಂಡಿತ್ತು. ಬಳಿಕ ತನಿಖೆಯನ್ನು ಸರ್ಕಾರ ಸಿಬಿಐಗೆ ಹಸ್ತಾಂತರ ಮಾಡಿತ್ತು.
ಸಿಬಿಐ ದಾಖಲು ಮಾಡಿರುವ ಜಾರ್ಜ್ ಶೀಟ್‌ನಲ್ಲಿ ಐಎಂಎ ಸಂಸ್ಥೆಯ ಸ್ಥಾಪಕ ಮನ್ಸೂರ್ ಖಾನ್ ಮೊದಲ ಆರೋಪಿ. ಬಿಡಿಎ ಮುಖ್ಯ ಇಂಜಿನಿಯರ್ ಕುಮಾರ್ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಈ ಪ್ರಕರಣದಲ್ಲಿ ಆರೋಪಿಗಳು.
ಜೂನ್ 10ರಂದು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಹಗರಣದ ಮೊದಲ ದೂರು ದಾಖಲಾಗಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. 30 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಸಿಬಿಐ ತನಿಖೆ ಕೈಗೊಂಡಿದೆ.












Click it and Unblock the Notifications