ಐಎಂಎ ಹಗರಣ : ಜಿಲ್ಲಾಧಿಕಾರಿ 3 ದಿನಗಳ ಕಾಲ ಎಸ್‌ಐಟಿ ವಶಕ್ಕೆ
ಬೆಂಗಳೂರು, ಜುಲೈ 09 : ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಬಿ.ಎಂ.ವಿಜಯ ಶಂಕರ್ ಅವರನ್ನು ಮೂರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಲಾಗಿದೆ. ಐಎಂಎ ಕಂಪನಿಗೆ ಕ್ಲೀನ್ ಚಿಟ್ ನೀಡಲು ಲಂಚ ಪಡೆದ ಆರೋಪದ ಮೇಲೆ ಜಿಲ್ಲಾಧಿಕಾರಿಗಳನ್ನು ಎಸ್‌ಐಟಿ ಬಂಧಿಸಿದೆ.
ಮಂಗಳವಾರ ಬೆಂಗಳೂರಿನ 1ನೇ ಸಿಸಿಎಚ್ ಕೋರ್ಟ್ ಬಿ.ಎಂ.ವಿಜಯ ಶಂಕರ್ ಅವರನ್ನು ಮೂರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ಆದೇಶ ನೀಡಿದೆ. ಸೋಮವಾರ ವಿಚಾರಣೆ ಬಳಿಕ ವಿಜಯ ಶಂಕರ್ ಅವರನ್ನು ಎಸ್‌ಐಟಿ ಬಂಧಿಸಿತ್ತು.
ಐಎಂಎ ಸಮೂಹ ಸಂಸ್ಥೆಗೆ ಕ್ಲೀನ್ ಚಿಟ್ ನೀಡಲು 1.5 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಬಿ.ಎಂ.ವಿಜಯಶಂಕರ್ ಮೇಲಿದೆ. ಕಂಪನಿಯ ಪರವಾಗಿ ವರದಿ ನೀಡಲು 4.5 ಕೋಟಿ ರೂ. ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ಎಸ್‌ಐಟಿ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಐಎಂಎ ಕಂಪನಿ ಅವ್ಯವಹಾರದ ಕುರಿತು ತನಿಖೆ ನಡೆಸಲು ಎಸಿ ನೇತೃತ್ವದಲ್ಲಿ 2018ರ ಜೂನ್‌ನಲ್ಲಿ ದೂರು ಪ್ರಾಧಿಕಾರ ರಚನೆ ಮಾಡಲಾಗಿತ್ತು. ಅವರು 2019ರ ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು.
ಜಿಲ್ಲಾಧಿಕಾರಿಗಳು ಕಂಪನಿ ವಿರುದ್ಧ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಟಿಪ್ಪಣಿ ಹಾಕಿ ಏಪ್ರಿಲ್ 8ರಂದು ರಾಜ್ಯ ಸರ್ಕಾರಕ್ಕೆ ವರದಿಯನ್ನು ಕಳಿಸಿದ್ದರು. ಟಿಪ್ಪಣಿ ಹಾಕುವ 2 ದಿನಗಳ ಮೊದಲು ಬಿ.ಎಂ.ವಿಜಯ ಶಂಕರ್ ಅವರು 1.5 ಕೋಟಿ ಲಂಚ ಪಡೆದಿದ್ದರು ಎಂಬುದು ಆರೋಪವಾಗಿದೆ.
ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಮತ್ತು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರು ಲಂಚ ಪಡೆದ ಪ್ರಕರಣದ ವಿಚಾರಣೆಯನ್ನು ಎಸಿಬಿಗೆ ವರ್ಗಾವಣೆ ಮಾಡಲಾಗುತ್ತದೆ. ಇಬ್ಬರು ಸರ್ಕಾರಿ ಅಧಿಕಾರಿಗಳು. ಆದ್ದರಿಂದ, ಎಸಿಬಿ ತನಿಖೆ ನಡೆಸಲಿದೆ.












Click it and Unblock the Notifications