3,00,00,000 ರೂಪಾಯಿ ಮೌಲ್ಯದ ಒತ್ತುವರಿ ತೆರವು, ಭೂಗಳ್ಳರಿಗೆ ಆಘಾತ!
ಬೆಂಗಳೂರಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದು ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರ ಕಾಟ ಈಗ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಸ್ಥಳೀಯ ಪ್ರಭಾವಿಗಳ ಸಹಾಯ ಪಡೆದು, ಕೋಟಿ ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ಗುಳುಂ ಮಾಡಿದ್ದಾರೆ. ಇಂತಹ ಜಾಗದಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಟ್ಟಡ & ಲೇಔಟ್ ನಿರ್ಮಾಣ ಕೂಡ ನಡೆದಿದೆ. ಆದರೆ ಇಂತಹ ಭೂಗಳ್ಳರಿಗೆ ಇದೀಗ ದೊಡ್ಡ ಆಘಾತ ನೀಡಲು ಮುಂದಾಗಿದೆ ಬೆಂಗಳೂರು ಜಿಲ್ಲಾಡಳಿತ!
ಬೆಂಗಳೂರು ಕನ್ನಡಿಗರ ರಾಜಧಾನಿ ಆಗಿದ್ದರೂ ಇದೀಗ ಸಾಕಷ್ಟು ಬದಲಾಗಿ ಹೋಗಿದೆ, ಕನ್ನಡಿಗರನ್ನ ಬಿಟ್ಟು ಬೇರೆಬೇರೆ ರಾಜ್ಯಗಳಿಂದ ಬಂದವರು ಕರ್ನಾಟಕ ಭೂಮಿ ಒತ್ತುವರಿ ಮಾಡ್ಕೊಂಡು ಮೆರೆದಿದ್ದರು. ಕನ್ನಡಿಗರ ರಾಜಧಾನಿ ಬೆಂಗಳೂರು ಜಗತ್ತು ಗುರುತಿಸುವ ಹಂತಕ್ಕೆ ಬೆಳೆದು ನಿಂತಿದ್ದು, ಎಲ್ಲರೂ ಸಲಾಂ ಹೊಡೆಯುತ್ತಾರೆ. ಆದರೆ ಈ ಸಮಯದಲ್ಲೇ ಬೆಂಗಳೂರಲ್ಲಿ ಒತ್ತುವರಿ ಮಾಡುವವರ ಕಾಟ ಜೋರಾಗಿದ್ದು ಅವರಿಗೆ ಸರಿಯಾಗಿ ಪಾಠ ಕಲಿಸುವ ಕೆಲಸ ಕೂಡ ಜೋರಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿ ಆಗಿರುವ 3.18 ಕೋಟಿ ರೂಪಾಯಿ ಮೌಲ್ಯದ ಜಮೀನು ಮತ್ತೆ ವಶಕ್ಕೆ ಪಡೆಯದಲಾಗಿದೆ.

3.18 ಕೋಟಿ ರೂಪಾಯಿ ಒತ್ತುವರಿ ತೆರವು
ಹೌದು, ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಇದೀಗ ಮತ್ತೆ ಚುರುಕಾಗಿದೆ. ಇದೀಗ ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರ್ ಕಾರ್ಯಾಚರಣೆ ಅಖಾಡಕ್ಕೆ ಇಳಿದಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಶುರು ಮಾಡಲಾಗಿದ್ದು, ಇಂದು ಒಂದೇ ದಿನ 3.18 ಕೋಟಿ ಅಂದಾಜು ಮೌಲ್ಯದ ಒಟ್ಟು 0-34 ಗುಂಟೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲಾಗಿದೆ. ಗುಂಡುತೋಪು ಹಾಗೂ ಕಾಂಪೌಂಡ್ ಹಾಕಿದ್ದ ಪ್ರದೇಶಕ್ಕೆ ಭೇಟಿ ನೀಡಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಯಾವ ಯಾವ ಏರಿಯಾದಲ್ಲಿ ತೆರವು?
ಬೆಂಗಳೂರು ದಕ್ಷಿಣ ತಾಲೂಕಿನಲ್ಲಿರುವ ಬೇಗೂರು ಹೋಬಳಿ ವಿಟ್ಟಸಂದ್ರದ ಸರ್ವೆ ನಂ 27ರ ಸರ್ಕಾರಿ ಗುಂಡುತೋಪು ಒತ್ತುವರಿ ತೆರವು ಮಾಡಲಾಗಿದ್ದು, 0.04 ಗುಂಟೆ ಜಾಗ ಮರಳಿ ವಶಕ್ಕೆ ಪಡೆಯಲಾಗಿದೆ. ಉತ್ತರಹಳ್ಳಿ ಹೋಬಳಿ ಕೊತ್ತನೂರು ಗ್ರಾಮದ ಸರ್ವೆ ನಂ. 46 ಕಾಂಪೌಂಡ್ ಒತ್ತುವರಿ ತೆರವುಗೊಳಿಸಿರುವ ಅಧಿಕಾರಿಗಳು, 0.20 ಗುಂಟೆ ಜಾಗವನ್ನು ಈಗ ವಶಕ್ಕೆ ಪಡೆದಿದ್ದಾರೆ. ಈ ಜಾಗದ ಮೌಲ್ಯವು 2.50 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಹಾಗೂ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಕಮ್ಮಸಂದ್ರದ ಸರ್ವೆ ನಂ 09 ಸರ್ಕಾರಿ ಗುಂಡು ತೋಪು ಒತ್ತುವರಿ ತೆರವುಗೊಳಿಸಿ 0.10 ಗುಂಟೆ ಜಾಗ ವಶಕ್ಕೆ ಪಡೆಯಲಾಗಿದೆ.












Click it and Unblock the Notifications