11 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ತೆರವು! Bengaluru Property
ಬೆಂಗಳೂರು: ರಾಜಧಾನಿಯಲ್ಲಿ ಭೂಗಳ್ಳರ ಕಾಟ ಇನ್ನಿಲ್ಲದಂತೆ ಹೆಚ್ಚಾಗುತ್ತಿರುವ ಕಾರಣಕ್ಕೆ ಈಗ ಕಠಿಣ ಕ್ರಮ ಕೈಗೊಂಡು, ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಿ ಬಿಸಿ ಮುಟ್ಟಿಸಲಾಗುತ್ತಿದೆ. ಇಂದು ಕೂಡ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಕಾರ್ಯಾಚರಣೆ ನಡೆಸಿ, ಹಲವು ಕಡೆ ಒತ್ತುವರಿ ಮಾಡಿಕೊಂಡಿದ್ದ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಭಾರಿ ದೊಡ್ಡ ಪ್ರಮಾಣದ ಸರ್ಕಾರಿ ಜಮೀನು ರಕ್ಷಣೆ ಮಾಡಲಾಗಿದೆ. 11 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡುವ ಮೂಲಕ ಬೆಂಗಳೂರು ಜಿಲ್ಲಾಡಳಿತ ಮತ್ತೆ ದಾಖಲೆ ಬರೆದಿದೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 11.16 ಕೋಟಿ ರೂಪಾಯಿ ಅಂದಾಜು ಮೌಲ್ಯ ಹೊಂದಿರುವ 4 ಎಕರೆ 0.31 ಗುಂಟೆ ಸರ್ಕಾರಿ ಜಮೀನು ಮತ್ತೆ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ಜಮೀನು ಮತ್ತೆ ಸರ್ಕಾರದ ವಶಕ್ಕೆ ಪಡೆದು ಒತ್ತುವರಿ ಮಾಡಿಕೊಂಡವರಿಗೆ ಬುದ್ಧಿ ಕಲಿಸಲಾಗಿದೆ. ಹಾಗಾದರೆ ಯಾವ ಯಾವ ಭಾಗದಲ್ಲಿ ಈಗ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ? ಬನ್ನಿ ತಿಳಿಯೋಣ.

ಯಾವ ಯಾವ ಭಾಗದಲ್ಲಿ ಒತ್ತುವರಿ ತೆರವು?
ಅಂದಹಾಗೆ ಬೆಂಗಳೂರು ನಗರದಲ್ಲಿ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ವಿವಿಧ ತಾಲೂಕು ತಹಸೀಲ್ದಾರ್ ಸಾಥ್ ನೀಡಿದ್ದರು. ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಗೋಮಾಳ, ಕಾಲುವೆ, ಸರ್ಕಾರಿ ಬೀಳು, ಕೆರೆ & ಖರಾಬ್ ಜಾಗಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಂಗಳೂರಿನ ಹಲವು ಭಾಗದಲ್ಲಿ ಕೈಗೊಂಡ ತೆರವು ಕಾರ್ಯಾಚರಣೆ ಯಶಸ್ವಿ ಆಗಿದೆ. ಹಾಗಾದ್ರೆ ಅತಿಹೆಚ್ಚು ಮೌಲ್ಯದ ಜಮೀನು ತೆರವು ಮಾಡಿದ್ದು ಎಲ್ಲಿ? ಮುಂದೆ ಓದಿ.
ಒಂದೇ ಕಡೆ ಐದು ಕೋಟಿ ರೂಪಾಯಿ ಜಮೀನು!
ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ ಬೈಯಪ್ಪನ ಹಳ್ಳಿ ಗ್ರಾಮದಲ್ಲಿ ಸುಮಾರು 5 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಸೇರಿದಂತೆ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಬೇಗೂರು ಗ್ರಾಮದಲ್ಲಿ 1.50 ಕೋಟಿ ರೂಪಾಯಿ ಮೌಲ್ಯದ ಜಮೀನು ವಶಕ್ಕೆ ಪಡೆದು ಕಾರ್ಯಾಚರಣೆ ನಡೆಸಲಾಯಿತು. ಹಾಗೇ ಯಲಹಂಕ ತಾಲೂಕಿನ ವಿವಿಧೆಡೆ ಕೂಡ ಇದೇ ರೀತಿ ಕಾರ್ಯಾಚರಣೆಯನ್ನ ಕೈಗೊಂಡು ಜಮೀನು ರಕ್ಷಣೆ ಮಾಡಲಾಗಿದೆ. ಹಾಗೇ ಇನ್ನುಳಿದ ಒತ್ತುವರಿದಾರರಿಗೆ ಕೂಡ ಈ ಮೂಲಕ ಖಡಕ್ ಸಂದೇಶ ರವಾನೆಯಾಗಿದೆ.












Click it and Unblock the Notifications