ಕೇಂದ್ರದ ಅನುದಾನ: ರಾಜಕೀಯ ಬೆರೆಸಿದರೆ ರಾಜ್ಯಕ್ಕೇ ನಷ್ಟ: ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಬೆಂಗಳೂರು, ಫೆಬ್ರವರಿ 15: ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಬರುವ ಅನುದಾನದ ಕುರಿತು ವಾಸ್ತವದ ಅಂಶದ ಮೇಲೆ ನಾವು ಚರ್ಚೆ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ. ಅದನ್ನು ಬಿಟ್ಟು ಇದರಲ್ಲಿ ರಾಜಕೀಯ ಬೆರೆಸಿ ಮಾತನಾಡಿದರೆ ರಾಜ್ಯಕ್ಕೆ ನಷ್ಟವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಸಿದರು.
ಜಂಟಿ ಅಧಿವೇಶನದಲ್ಲಿ ಕಲಾಪದಲ್ಲಿ ಮಾತನಾಡಿದ ಅವರು, 15 ನೇ ಹಣಕಾಸು ಆಯೋಗ ಈಗಾಗಲೇ ವರದಿ ಕೊಡಲಾಗಿದೆ. ನಾವು ಕಾಂಪ್ಲೆಕ್ಸ್ ಪರಿಸ್ಥಿತಿಯಲ್ಲಿ ಇದ್ದೇವೆ. ಈಗ ಎಲ್ಲವೂ ಮುಗಿದು ಹೋಗಿದೆ. ಈ ಆಯೋಗದ ಅವಧಿ 2026ರ ವರೆಗೆ ಇದೆ. ಈ ಸಂದರ್ಭದಲ್ಲಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವುದು ರಾಜಕೀಯವಲ್ಲದೇ ಮತ್ತೇನು ಎಂದು ಅವರು ಪ್ರಶ್ನಿಸಿದರು.

ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಎಲ್ಲರೂ ಕೂಡಿಯೇ ಕೇಳೋಣ. ಅದರ ಬದಲು ನಮಗೆ 1.87 ಲಕ್ಷ ಕೋಟಿ ಬರುತ್ತಿತ್ತು ಎಂದು ಶೆಕ್ ಮಹಮೊದ್ ಲೆಕ್ಕ ಮಾತನಾಡಿದರೆ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ಕಿಡಿ ಕಾಡಿದರು.
ಯೋಜನೆ ಅನುದಾನದ ಪಡೆಯಲು ಚರ್ಚೆಯಾಗಲಿ
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ಅನುದಾನ ಘೋಷಣೆ ಮಾಡಿತ್ತು. ಅದನ್ನು ಹೇಗೆ ಪಡೆಯಬೇಕು ಎನ್ನುವ ಬಗ್ಗೆ ಚರ್ಚೆ ಮಾಡೋಣ. 16 ನೇ ಹಣಕಾಸು ಆಯೋಗ ಬರುತ್ತಿದೆ. ಅದರಲ್ಲಿ ನಮಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರಾಜ್ಯಕ್ಕೆ ಅನುದಾನ ತರುವ ನಿಟ್ಟಿನಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ನಮಗೂ ಅಷ್ಟೇ ಜವಾಬ್ದಾರಿ ಇದೆ. ಇಬ್ಬರೂ ಸೇರಿ ರಾಜ್ಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಪೊಲೀಸ್ ಅಧಿಕಾರಿ ಅಮಾನತಿಗೆ ಆಗ್ರಹ
ಇನ್ನೂ ಮಂಗಳೂರಿನ ಸೆಂಟ್ ಜೆರೋಸಾ ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲಿಸ್ ಠಾಣೆಯ ಪೊಲಿಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಅನಿಲ್ ಜರಾಬ್ ಲೊಬೊ ಅವರು ದೂರು ಕೊಟ್ಟಿದ್ದಾರೆ. ಮೊದಲು ಮಕ್ಕಳು ದೂರು ಕೊಟ್ಟಾಗ ಅದನ್ನು ಎಫ್‌ಐ ಆರ್ ಮಾಡಲಿಲ್ಲ. ಅದನ್ನು ಪ್ರಾಥಮಿಕ ವಿಚಾರಣೆ ಮಾಡಿದಾಗ ಅದರಲ್ಲಿ ತಪ್ಪು ಕಂಡಿಲ್ಲ ಅಂತ ಎಫ್ ಐ ಆರ್ ಮಾಡಿಲ್ಲ ಎನ್ನುತ್ತೀರಾ. ಶಾಸಕರ ವಿರುದ್ದ ಯಾವುದೇ ವಿಚಾರಣೆ ಮಾಡದೇ ಎಫ್ ಐಆರ್ ಮಾಡಿದ್ದೀರಾ. ಪೊಲೀಸರು ತಮ್ಮ ಕೆಲಸದಲ್ಲಿ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಪ್ರಶ್ನಿಸಿದರು.












Click it and Unblock the Notifications