ಇದ್ರೀಸ್ ಪಾಷಾ ಹತ್ಯೆ: ಸಾತನೂರಿನಿಂದ ರಾಜಸ್ಥಾನಕ್ಕೆ ಪುನೀತ್ ಕೆರೆಹಳ್ಳಿ ತಂಡ ತಲುಪಿದ್ದು ಹೀಗೆ
ಬೆಂಗಳೂರು, ಏಪ್ರಿಲ್.05: ಇದ್ರೀಸ್ ಪಾಷಾ ಕೊಲೆ ಪ್ರಕರಣದಲ್ಲಿ ಸಾತನೂರು ಠಾಣೆ ಪೊಲೀಸರು ಪುನೀತ್ ಕೆರೆಹಳ್ಳಿ ಸೇರಿ ಐವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿದೆ. ರಾಮನಗರ ಪೊಲೀಸರ ಕಾರ್ಯಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 1 ರ ಮುಂಜಾನೆ ಜಾನುವಾರು ಸಾಗಟ ವಾಹನದ ಸಹಾಯಕ ಚಾಲಕ ಮಂಡ್ಯದ ಗುತ್ತಲು ನಿವಾಸಿ ಇದ್ರೀಸ್ ಪಾಷಾ ಎಂಬುವವರನ್ನು ಹತ್ಯೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ಸಂಬಂಧ ಪುನೀತ್ ಕೆರೆಹಳ್ಳಿ ಮತ್ತು ಇತರ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಡಿಜಿಪಿ ಅಲೋಕ್ ಕುಮಾರ್, "ಕೊನೆಗೆ ಬೆಕ್ಕು ಮತ್ತು ಇಲಿ ಆಟ ಮುಗಿಯಿತು. ಸಾತನೂರ್ ಘಟನೆಯಲ್ಲಿ ಭಾಗಿಯಾಗಿದ್ದ ಪುನೀತ್ ಕೆರೆಹಳ್ಳಿ ಮತ್ತು ತಂಡ, ಸುದೀರ್ಘ ಬೆನ್ನಟ್ಟಿದ ಬಳಿಕ ಕೊನೆಗೂ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಸೆರೆ. ತಮ್ಮ ನಿರಂತರ ಪ್ರಯತ್ನಕ್ಕಾಗಿ ಎಸ್ಪಿ ರಾಮನಗರ ಮತ್ತು ತಂಡಕ್ಕೆ ಅಭಿನಂದನೆಗಳು. ಸೂಕ್ತ ತನಿಖೆಯಿಂದ ನ್ಯಾಯ ಸಿಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು, ಘಟನೆ ಬಗ್ಗೆ ಮಾಹಿತಿ ನೀಡಿರುವ ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ, ಇದ್ರೀಸ್ ಪಾಷಾ ಸಾವು ಪ್ರಕರಣದಲ್ಲಿ ಸಾತನೂರು ಠಾಣೆ ಪೊಲೀಸರು ಪುನೀತ್ ಕೆರೆಹಳ್ಳಿ ಸೇರಿ ಐವರನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಮಾ.31ರಂದು ಈ ಪ್ರಕರಣ ನಡೆದಿತ್ತು. ಪ್ರಕರಣ ಸಂಬಂಧ ಮೂರು ಎಫ್ಐಆರ್ ದಾಖಲಾಗಿದೆ. ಪುನೀತ್ ಕೆರೆಹಳ್ಳಿ ಹಾಗೂ ನಾಲ್ವರು ಸಹಚರರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು" ಎಂದು ಹೇಳಿದ್ದಾರೆ.
"ರಾಜಸ್ಥಾನದ ಬಾರ್ಡರ್ ಜಿಲ್ಲೆಯಾದ ಬನಸ್ವಾರದಲ್ಲಿ ಐವರನ್ನ ಬಂಧಿಸಲಾಗಿದೆ. ಇವರನ್ನು ಪತ್ತೆ ಮಾಡುವಲ್ಲಿ ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರು ಸಹಾಯ ಮಾಡಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಪುನೀತ್ ಕೆರೆಹಳ್ಳಿ (A1), ಗೋಪಿ (A2), ಪವನ್ ಕುಮಾರ್ (A3), ಪಿಲ್ಲಿಂಗ್ ಅಂಬಿಗಾರ್ (A4), ಸುರೇಶ್ ಕುಮಾರ್ (A5) ಎಂದು ಗುರುತಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಬಂಧಿತರನ್ನು ನಾಳೆ ರಾಜಸ್ಥಾನ ಕೋರ್ಟ್ ನಿಂದ ಅನುಮತಿ ಪಡೆದು ರಾಮನಗರಕ್ಕೆ ಕರೆತರುತ್ತೇವೆ. ಪುನೀತ್ ಕೆರೆಹಳ್ಳಿ ವಿರುದ್ಧ ಈಗಾಗಲೇ 11ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಎಲ್ಲಾ ಪ್ರಕರಣಗಳ ಕುರಿತು ತನಿಖೆ ನಡೆಸಲಾಗುತ್ತದೆ. ಕಳೆದ 5 ದಿನಗಳಿಂದ ಪೋನ್ ಸ್ವೀಚ್ ಆಫ್ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಮೊಬೈಲ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಇನ್ನು ಆರೋಪಿಗಳು ಹುಬ್ಬಳ್ಳಿ- ಬೆಳಗಾವಿ, ಮಹಾರಾಷ್ಟ್ರ, ಗುಜರಾತ್ ಮಾರ್ಗ ಬಳಸಿ ರಾಜಸ್ಥಾನ ತಲುಪಿದ್ದರು ಎಂದು ಮಾಹಿತಿ ಬಂದಿದೆ. ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಆರೋಪಿಗಳು ನಂತ ಫೇಸ್‌ಬುಕ್ ಮೂಲಕ ಲೈವ್ ಬಂದು ತಾವು ತಲೆ ಮರೆಸಿಕೊಂಡಿಲ್ಲ ಎಂದಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಕೇಸ್ ದಾಖಲಾಗಿತ್ತು.
ಇತ್ತ ಪುನೀತ್ ಕೆರೆಹಳ್ಳಿ ಬಂಧನವಾಗುತ್ತಿದ್ದಂತೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, "ಇದರಲ್ಲಿ ಯಾರಾದರೂ ಒಬ್ಬೇ ಒಬ್ಬ ಬಿಜೆಪಿ ನಾಯಕರ ಮಕ್ಕಳಿದ್ದಾರಾ?. ಬಿಜೆಪಿ ನಾಯಕರ ಮಕ್ಕಳು ಏಕೆ ಗೋರಕ್ಷಣೆಗೆ ಹೋಗುವುದಿಲ್ಲ..? ಅವರಿಗೇಕೆ ಧರ್ಮ ರಕ್ಷಣೆಯ ಹೊಣೆ ಇಲ್ಲ..? ತಮ್ಮ ಮಕ್ಕಳನ್ನು ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಕಳಿಸಿ, ಉದ್ಯಮಿಗಳನ್ನಾಗಿಸುವ ಬಿಜೆಪಿ ನಾಯಕರು ಇತರರ ಮಕ್ಕಳನ್ನು ಪ್ರಚೋದಿಸಿ ಜೈಲಿಗೆ ಕಳಿಸುತ್ತದೆ" ಎಂದು ಟೀಕಿಸಿದೆ.












Click it and Unblock the Notifications