ಐಎಂಎ ಹಗರಣ : ರೋಷನ್ ಬೇಗ್ ಎಸ್‌ಐಟಿ ವಶಕ್ಕೆ
ಬೆಂಗಳೂರು, ಜುಲೈ 15 : ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ, ಮಾಜಿ ಸಚಿವ ಮತ್ತು ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ.
ಸೋಮವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರೋಷನ್ ಬೇಗ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂಬೈಗೆ ತೆರಳಲು ಅವರು ವಿಶೇಷ ವಿಮಾನ ಬುಕ್ ಮಾಡಿದ್ದರು ಎಂಬ ಮಾಹಿತಿ ಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿತ್ತು.
ಈಗಾಗಲೇ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ರೋಷನ್ ಬೇಗ್, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸೇರುವುದಾಗಿ ಅವರು ಹಲವು ಬಾರಿ ಹೇಳಿದ್ದಾರೆ. ಐಎಂಎ ಹಗರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿಬರುತ್ತಿದೆ.

ರೋಷನ್ ಬೇಗ್ ಸೋಮವಾರ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅವರು ಹಜ್ ಯಾತ್ರೆಯ ಕಾರ್ಯಗಳಿದ್ದು, ಇಂದು ಬರಲಾಗುವುದಿಲ್ಲ ಎಂದು ತಮ್ಮ ಆಪ್ತ ಸಹಾಯಕರ ಬಳಿ ಎಸ್‌ಐಟಿ ಅಧಿಕಾರಿಗಳಿಗೆ ಹೇಳಿ ಕಳಿಸಿದ್ದರು.
ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಸಹ ರೋಷನ್ ಬೇಗ್ ಹೆಸರನ್ನು ವಿಡಿಯೋದಲ್ಲಿ ಹೇಳಿದ್ದ. ಅಂದಿನಿಂದ ಎಸ್‌ಐಟಿ ರೋಷನ್ ಬೇಗ್ ಅವರ ಚಲನವಲನದ ಮೇಲೆ ಕಣ್ಣಿಟ್ಟಿತ್ತು. ಇಂದು ಅವರು ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ ಎಂಬ ಮಾಹಿತಿ ಪಡೆದ ತಕ್ಷಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಎಸ್‌ಐಟಿ ಅಧಿಕಾರಿ ಗಿರೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರೋಷನ್ ಬೇಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿಯೇ ಅವರ ವಿಚಾರಣೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.












Click it and Unblock the Notifications