IAF Officer Attack Video: ಅರೆಸ್ಟ್ ಆಗ್ತಾರಾ ವಿಂಗ್ ಕಮಾಂಡರ್?: ಪೊಲೀಸ್ ಕಮಿಷನರ್‌ಗೆ ಸಿಎಂ ಆದೇಶ..
ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಏರ್‌ಪೋರ್ಸ್ ವಿಂಗ್ ಕಮಾಂಡ್ ಶಿಲಾದಿತ್ಯ ಬೋಸ್ ಮತ್ತು ಬೈಕ್ ಸವಾರ ವಿಕಾಸ್ ಕುಮಾರ್ ಅವರ ಮಧ್ಯದ ಗಲಾಟೆ (Bengaluru Road Rage) ಮುಖ್ಯಮಂತ್ರಿಗಳ ತನಕ ಹೋಗಿದೆ. ಈ ಘಟನೆ ಸಾಕಷ್ಟು ಟ್ವಿಸ್ಟ್ ಪಡೆಯುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗಳು ಶುರುವಾದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಈ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಗರ ಪೊಲೀಸ್ ಆಯುಕ್ತರಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ನಂತರ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ ಎಂದು ಅವರು ಹೇಳಿದ್ದಾರೆ.
ತಪ್ಪಿತಸ್ಥರ ಯಾವ ಹುದ್ದೆಯಲ್ಲಿದ್ದರು ಬಿಡಬೇಡಿ: ಸಿಎಂ
ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೆ ಸರ್ಕಾರ ಕರ್ನಾಟಕದಲ್ಲಿದೆ. ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ. ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ.
ಮುಖ್ಯಮಂತ್ರಿಗಳು ನೇರವಾಗಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಸೂಚನೆ ನೀಡಿದ್ದಾರೆ. ತನಿಖೆ ನಡೆಸಿ ತಪ್ಪಿತಸ್ಥರ ಯಾರೇ ಆಗಲಿ ಕ್ರಮ ವಹಿಸಿ ಎಂದಿದ್ದಾರೆ. ಈಗಾಗಲೇ ವಿಡಿಯೋ ಸಾಕ್ಷ್ಯ ನೋಡಿದರೆ ವಿಂಗ್ ಕಮಾಂಡರ್ ಅತಿರೇಕದ ವರ್ತನೆ ಸಾಬೀತಾಗುತ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಸಾರ್ವಜನಿಕರಿಂದಲೇ ಸೂಕ್ತ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದೆ. ವಿಂಗ್ ಕಮಾಂಡರ್ ಅರೆಸ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.












Click it and Unblock the Notifications